ತಾರಾನಾಥ್ ಮೇಸ್ತ ಅವರ ‘ಅವಧೂತ ಲೀಲಾಮೃತ’ ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿ ಕೃತಿ ಲೋಕಾರ್ಪಣೆ

ಬ್ರಹ್ಮಾವರ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಬ್ರಹ್ಮಾವರದ ಅಪ್ಪ ಅಮ್ಮ ಅನಾಥಾಲಯದ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಸರಳಾ ಕಾರ್ಯಕ್ರಮದಲ್ಲಿ ತಾರಾನಾಥ್ ಮೇಸ್ತ ಶಿರೂರು ಅವರ “ಅವಧೂತ ಲೀಲಾಮೃತ” ಶ್ರೀಸದ್ಗುರು ನಿತ್ಯಾನಂದ ಸ್ವಾಮೀಜಿ ಕೃತಿ ಲೋಕಾರ್ಪಣೆಗೊಂಡಿತು.
ಸಮಾಜಸೇವಕ ನಿತ್ಯಾನಂದ ಒಳಕಾಡು ಕೃತಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, ನಿತ್ಯಾನಂದ ಸ್ವಾಮೀಜಿಗಳ ಕುರಿತ ಅವಧೂತ ಲೀಲಾಮೃತ ಕೃತಿ ಎಲ್ಲರೂ ಓದಲೇಬೇಕಾದ ಅಮೂಲ್ಯ ಆಧ್ಯಾತ್ಮಿಕ ಗ್ರಂಥ. ಕಳೆದ ಅರವತ್ತು ವರ್ಷಗಳ ಹಿಂದೆ ಬಹಳಷ್ಟು ಕರಾವಳಿಗರು ಬದುಕು ಕಟ್ಟಿಕೊಳ್ಳಲು ಮುಂಬೈಗೆ ತೆರಳಿದ್ದರು. ಅಲ್ಲಿ ನಿತ್ಯಾನಂದ  ಸ್ವಾಮೀಜಿಗಳಿಂದ ಅನುಗ್ರಹಪಡೆದು ಬದುಕಿನಲ್ಲಿ ಒಳಿತು ಪಡೆದವರು ಸಾವಿರಾರು ಮಂದಿ ಇದ್ದಾರೆ ಎಂದರು.
ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ನನ್ನಿಂದ ಅವಧೂತ ಲೀಲಾಮೃತ ಕೃತಿ ರಚಿತವಾಯಿತು. ಪುರಾಣಗಳ ಕಾಲದಿಂದಲೂ ಋಷಿ- ಮುನಿಗಳು ಸಮಾಜಕ್ಕೆ ಉಪಯುಕ್ತ ಸಂದೇಶ ನೀಡಿ ಆರೋಗ್ಯಪೂರ್ಣ ಸಮಾಜ ರೂಪಿಸಲು ಪ್ರೇರಕರಾಗಿದ್ದಾರೆ.  ಇಂದು ವಿಜ್ಞಾನ ತಂತ್ರಜ್ಞಾನ ಎಷ್ಟೇ ಬೆಳೆದರೂ ಸುಖ ಶಾಂತಿ ನೆಮ್ಮದಿಯ ಬದುಕಿಗೆ ಆಧ್ಯಾತ್ಮದ ಬೆಳಕಿನ ಅಗತ್ಯವಿದೆ. ಸದ್ಗುರು ನಿತ್ಯಾನಂದ ಸ್ವಾಮೀಜಿ ಅನೇಕ ಪವಾಡಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ, ಪ್ರೇರಣೆ  ನೀಡಿದ್ದಾರೆ. ಅವರ ಉಪದೇಶಾಮೃತ ಸಾರ್ವಕಾಲಿಕ ಮೌಲ್ಯ ಹೊಂದಿದ್ದು ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ ಎಂದು ಲೇಖಕ ತಾರಾನಾಥ್ ಮೇಸ್ತ ಶಿರೂರು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಕಳುಹಿಸಿರುವ ಸಂದೇಶ ಪತ್ರವನ್ನು  ಸಭೆಯಲ್ಲಿ ಓದಲಾಯಿತು.
ಅಪ್ಪ ಅಮ್ಮ ಅನಾಥಾಲಯದ ಸಂಚಾಲಕ ಪ್ರಶಾಂತ್ ಪೂಜಾರಿ ಕೂರಾಡಿ, ನಿರ್ಮಿತಿ ಕೇಂದ್ರದ ಅಭಿಜಿತ್ ಕುಮಾರ್ ಹಾಗೂ ಆಶ್ರಮವಾಸಿಗಳು ಉಪಸ್ಥಿತರಿದ್ದರು.