ತಪಸ್ಸ್ – 201 ಸಾಮರ್ಥ್ಯ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ

ಕಾರವಾರ(ಉತ್ತರ ಕನ್ನಡ): ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್)ನಲ್ಲಿಂದ ಪ್ರಾಯೋಗಿಕ ಹಾರಾಟ ನಡೆಸಿದ ತಪಸ್ಸ್-201, ಕಾರವಾರ ನೌಕಾನೆಲೆಯಿಂದ 148 ಕಿ.ಮೀ ದೂರದಲ್ಲಿದ್ದ ಐಎನ್‌ಎಸ್ ಸುಭದ್ರದಲ್ಲಿ ಸುರಕ್ಷಿತವಾಗಿ ಇಳಿಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಶ್‌ಮೆಂಟ್ ವಿನ್ಯಾಸಗೊಳಿಸಿದ ತಪಸ್ಸ್-201 ಏರಿಯಲ್ ವೆಹಿಕಲ್‌, 3.30 ಗಂಟೆಗಳ ತಡೆರಹಿತ ಹಾರಾಟ ನಡೆಸಿ ಸಾಮರ್ಥ್ಯ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ.

ಪ್ರಾಯೋಗಿಕ ಪರೀಕ್ಷೆಯಲ್ಲಿ ತಪಸ್ಸ್ – 201 ಯಶಸ್ವಿ: ಮಾನವ ರಹಿತ ಏರಿಯಲ್ ವೆಹಿಕಲ್‌ನ ಸಾಮರ್ಥ್ಯ ಪರೀಕ್ಷೆಗಾಗಿ 285 ಕಿ.ಮೀ. ದೂರದಲ್ಲಿರುವ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್)ನಿಂದ ಹಾರಾಟಕ್ಕೆ ಚಾಲನೆ ನೀಡಿತ್ತು.

ಈ ಏರಿಯಲ್ ವೆಹಿಕಲ್‌ನ ನಿಯಂತ್ರಣಕ್ಕಾಗಿ ಐಎನ್‌ಎಸ್ ಸುಭದ್ರಾದಲ್ಲಿ ಒಂದು ಗ್ರೌಂಡ್ ಕಂಟ್ರೋಲ್ ಸ್ಟೇಷನ್ (ಜಿಸಿಎಸ್) ಮತ್ತು ಎರಡು ಶಿಪ್ ಡೇಟಾ ಟರ್ಮಿನಲ್ (ಎಸ್‌ಡಿಟಿ) ಸ್ಥಾಪಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡಿಫೆನ್ಸ್ ರಿಸರ್ಚ್ ಡೆವಲಪ್‌ಮೆಂಟ್ ಆರ್ಗನೈಸೇಶನ್ (ಡಿಆರ್‌ಡಿಒ) ಮತ್ತು ಭಾರತೀಯ ನೌಕಾಪಡೆಯು ಮಾನವ ರಹಿತ ಏರಿಯಲ್ ವೆಹಿಕಲ್‌ನ (ಯುಎವಿ) ಕಮಾಂಡ್ ಮತ್ತು ಕಂಟ್ರೋಲ್ ಸಾಮರ್ಥ್ಯಗಳ ಪ್ರಾಯೋಗಿಕ ಪರೀಕ್ಷಾರ್ಥ ನಡೆಸಿದ ಈ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿ ನೆರವೇರಿದೆ ಎಂದು ಡಿಫೆನ್ಸ್ ರಿಸರ್ಚ್ ಡೆವಲಪ್‌ಮೆಂಟ್ ಆರ್ಗನೈಸೇಶನ್ ತಿಳಿಸಿದೆ.

20,000 ಅಡಿ ಎತ್ತರದಲ್ಲಿ ಹಾರಾಡಿದ ತಪಸ್-201 ಚಿತ್ರದುರ್ಗದಿಂದ 3.30 ಗಂಟೆಗಳ ತಡೆರಹಿತ ಹಾರಾಟ ನಡೆಸಿ ಕಾರವಾರದ ಅರಬ್ಬಿ ಸಮುದ್ರದಲ್ಲಿದ್ದ ಐಎನ್‌ಎಸ್ ಸುಭದ್ರಾ ಇಳಿದಾಣದ ಮೇಲೆ ಸುರಕ್ಷಿತವಾಗಿ ಲ್ಯಾಂಡ್​ ಆಗಿದೆ. ಪ್ರಾಯೋಗಿಕ ಪರೀಕ್ಷೆಯ ಬಳಿಕ ಮತ್ತೆ ಚಿತ್ರದುರ್ಗದ ಎಟಿಆರ್‌ಗೆ ಸುರಕ್ಷಿತವಾಗಿ ಬಂದು ತಲುಪಿದೆ.

ಈ ಮೂಲಕ ತನ್ನ ನಿಗದಿತ ಗುರಿಯನ್ನ ಮುಟ್ಟುವಲ್ಲಿ ತಪಸ್ಸ್-201 ಏರಿಯಲ್ ವೆಹಿಕಲ್‌ ಯಶಸ್ವಿಯಾಗಿದೆ.

ಪ್ರಿಡೇಟರ್ ಡ್ರೋನ್‌ಗಳ ಭಾರತೀಯ ಆವೃತ್ತಿ ಎಂದು ಕರೆಯಲ್ಪಡುವ ಈ ತಪಸ್, ಮಧ್ಯಮ ಶ್ರೇಣಿಯ ಎಲೆಕ್ಟ್ರೋ ಆಪ್ಟಿಕ್, ಲಾಂಗ್ ರೇಂಜ್ ಎಲೆಕ್ಟ್ರೋ ಆಪ್ಟಿಕ್, ಸಿಂಥೆಟಿಕ್ ಅಪರ್ಚರ್ ರಾಡಾರ್, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್, ಸಂವಹನ ಬುದ್ಧಿವಂತಿಕೆ ಮತ್ತು ದಿನವಿಡೀ ಕಾರ್ಯಕ್ಷಮತೆಯ ದಿನನಿತ್ಯದ ಪೇಲೋಡ್‌ಗಳಂತಹ ವಿಭಿನ್ನ ಸಂಯೋಜನೆಯ ಪೇಲೋಡ್‌ಗಳನ್ನು ಸಾಗಿಸಲು ತಪಸ್ಸ್-201 ಏರಿಯಲ್ ವೆಹಿಕಲ್‌ ಸಮರ್ಥವಾಗಿದೆ ಎಂದು ಪ್ರಾಯೋಗಿಕ ಪರೀಕ್ಷೆ ನೆರವೇರಿಸಿದ ತಂತ್ರಜ್ಞರು ಹೇಳಿದ್ದಾರೆ

ಮಧ್ಯಮ ಎತ್ತರದ ಈ ತಪಸ್- 201ನ್ನು ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಶ್‌ಮೆಂಟ್ (ಎಡಿಇ) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.

ಈ ವೆಹಿಕಲ್, 24 ರಿಂದ 30 ಗಂಟೆಗಳಷ್ಟು ಹಾರಾಟ ನಡೆಸುವ ಮೂಲಕ 3 ಸಶಸ್ತ್ರ ಪಡೆಗಳಿಗೆ ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ ಪಾತ್ರಗಳನ್ನು ನಿರ್ವಹಿಸಲು ಅಭಿವೃದ್ಧಿಪಡಿಸಲಾಗಿದೆ ಎಂದು ಡಿಆರ್​ಡಿಒ ಹೇಳಿಕೊಂಡಿದೆ.