“ಪಿತ್ರೋಡಿ ಪುತ್ರಿಯ ವಿಶ್ವದಾಖಲೆಯೂ ಹುತಾತ್ಮರಿಗೆ ಸಮರ್ಪಿತ : ವಿಶ್ವವಿಜೇತೆ ತನುಶ್ರೀ”

ಉಡುಪಿಯ ಸೈಂಟ್ ಸಿಸಿಲಿಸ್ ವಿದ್ಯಾ ಸಮೂಹ ಸಂಸ್ಥೆಯ ಕ್ರೀಡಾಂಗಣ ನಿನ್ನೆಯ ದಿನ 2 ವಿಶ್ವದಾಖಲೆಗೆ ಸಾಕ್ಷಿಯಾಯಿತು.ಸಾವಿರಾರು ಮಂದಿ ವೀಕ್ಷಕರಲ್ಲಿ ಸಾರ್ಥಕ ಭಾವ ಮೂಡಿತ್ತು.

ಈಗಾಗಲೇ 2 ವಿಶ್ವದಾಖಲೆ ಸ್ಥಾಪಿಸಿದ್ದ ಈ ಪುಟ್ಟ ಬಾಲೆ, ಒಂದು ನಿಮಿಷದಲ್ಲಿ  ಧನುರಾಸನ ಭಂಗಿಯ  ಈವರೆಗಿನ ಗರಿಷ್ಟ 62 ರೋಲ್ ಉರುಳಿದ್ದು,ಜೊತೆಗೆ 1.40 ನಿಮಿಷದಲ್ಲಿ 100 ಉರುಳುಗಳನ್ನು ಹಾಕುವ ಮೂಲಕ ಎರಡು ವಿಶ್ವದಾಖಲೆ ಸಾಧಿಸಿದ್ದಾರೆ.
ಈ ಅಪೂರ್ವ ಸಾಧನೆಗೆ ಸಾಕ್ಷಿಯಾಗಿದ್ದ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ನ ದಕ್ಷಿಣ ಏಷ್ಯಾ ನಿರ್ದೇಶಕ ಮನೀಶ್ ಬಿಶ್ನೋಯ್ ಪ್ರಮಾಣ ಪತ್ರ ಹಸ್ತಾಂತರಿಸಿ ,”ಅತ್ಯಂತ ಕಠಿಣ ಯೋಗಾಸನದಲ್ಲಿ ತನುಶ್ರೀ ಸಾಧನೆ ಮಾಡಿದ್ದಾರೆ.ಈವರೆಗೆ ಧನುರಾಸನದಲ್ಲಿ ಯಾರದ್ದೂ ದಾಖಲಾಗಿಲ್ಲ,ತನುಶ್ರೀ ಹೆಸರಿನೊಂದಿಗೆ ಹೊಸ ದಾಖಲೆ ಸೃಷ್ಟಿಯಾಗಿದೆ ಎಂದು ತಿಳಿಸಿದರು.
ಈ ಹಿಂದೆ 2017 ರಲ್ಲಿ ತನುಶ್ರೀ ಯೋಗದ ನಿರಾಲಂಭ ಪೂರ್ಣ ಚಕ್ರಾಸನವನ್ನು ಒಂದೇ ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದರು,2018 ರಲ್ಲಿ ದೇಹದ ಎದೆಯ ಭಾಗ ಹಾಗೂ ತಲೆಯನ್ನು ಸ್ಥಿರವಾಗಿ ಇರಿಸಿ ಉಳಿದ ಭಾಗವನ್ನು ನಿಮಿಷಕ್ಕೆ 42 ಬಾರಿ ತಿರುಗಿಸುವ (ಮೋಸ್ಟ್ ಫುಲ್ ಬಾಡಿ ರಿವೊಲ್ಯೂಶನ್ ಮೈಂಟೈನಿಂಗ್ ಎ ಚೆಸ್ಟ್ ಸ್ಟ್ಯಾಂಡ್ ಪೊಸಿಷನ್)ಮೂಲಕ ಗಿನ್ನೆಸ್ ದಾಖಲೆಗೈದಿದ್ದರು.
ಸತತ ಮೂರು ವರ್ಷಗಳಲ್ಲಿ ನಾಲ್ಕು ಸಾಧನೆಗೈದಿರುವ ತನುಶ್ರೀ ಉಡುಪಿ ಸೈಂಟ್ ಸಿಸಿಲಿಸ್ ಸ್ಕೂಲ್ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿನಿ.
ಶ್ರೀಯುತ ಉದಯ್ ಕುಮಾರ್ ಹಾಗೂ ಸಂಧ್ಯಾ ದಂಪತಿಯ ಪ್ರಥಮ ಪುತ್ರಿ ತನುಶ್ರೀ ಈ ಸಾಧನೆಯನ್ನು ಪುಲ್ವಾಮದಲ್ಲಿ ಮಡಿದ ಹುತಾತ್ಮ ಯೋಧರಿಗೆ ಅರ್ಪಣೆಗೈದರು.
ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ನಲ್ಲಿ ಮೂರು ದಶಕಗಳ ಅತ್ಯಂತ ಶಿಸ್ತಿನ ಇತಿಹಾಸ ಬರೆದಿರುವ
ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ನ ಸದಸ್ಯರಾಗಿರುವ ಉದಯ್ ಕುಮಾರ್
ಈ ಎಲ್ಲಾ ಸಾಧನೆಯ ಹಿಂದೆ ಪಿತ್ರೋಡಿ ತಂಡದ ಸಂಪೂರ್ಣ ಸಹಕಾರವನ್ನು ಸದಾ ಸ್ಮರಿಸುತ್ತಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್,ದ.ಕ ಮತ್ತು ಉಡುಪಿ ಮೀನುಗಾರರ ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ,ಜಿ.ಪಂ ಅಧ್ಯಕ್ಷ ದಿನಕರ ಬಾಬು,ಕಾರ್ಯಕ್ರಮದ ಆಯೋಜಕ ಬಡಗುಬೆಟ್ಟು ಕೋ ಆಪರೇಟಿವ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ,ಯೋಗ ಗುರು ರಾಮಕೃಷ್ಣ ಕೊಡಂಚ,ತಂದೆ ಉದಯ್ ಕುಮಾರ್,ರಂಗಕರ್ಮಿ ನಾಗೇಶ್ಉದ್ಯಾವರ, ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ನ ಅಧ್ಯಕ್ಷ ಮಲ್ಲೇಶ್ ಕುಮಾರ್,ಧರ್ಮಗುರು ವಿಲಿಯಂ ಮಾರ್ಟಿಸ್ ,ನಾಗರಾಜ್ ಭಟ್ ಪಾಂಗಾಳ ಹಾಗೂ ವಿಜಯ್ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು.
                             
                                                                      – ಕೋಟ ರಾಮಕೃಷ್ಣ ಆಚಾರ್ಯ