ತನುಜಾಸ್ ಮೈಂಡ್ ಥೆರಪಿ ಆಪ್ತಸಮಾಲೋಚನಾ ಕೇಂದ್ರ ಉದ್ಘಾಟನೆ

ಮಣಿಪಾಲ: ಖ್ಯಾತ ವ್ಯಕ್ತಿತ್ವ ತರಬೇತುಗಾರ್ತಿ ತನುಜಾ ಮಾಬೆನ್ ರವರ ತನುಜಾಸ್ ಮೈಂಡ್ ಥೆರಪಿ ಆಪ್ತಸಮಾಲೋಚನಾ ಕೇಂದ್ರವು ಅ.17 ಸೋಮವಾರದಂದು ಮಣಿಪಾಲದ ಕೆನರಾ ಬ್ಯಾಂಕಿನ ಎದುರು ಮನಿಸಿಪಲ್ ಕಾಂಪ್ಲೆಕ್ಸ್ ನ ಮೊದಲನೆ ಮಹಡಿಯಲ್ಲಿ ಉದ್ಘಾಟನೆಗೊಂಡಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಣಿಪಾಲ್ ಟೆಕ್ನಾಲಜೀಸ್ ನ ಕಾರ್ಯಾಧ್ಯಕ್ಷ ಗೌತಮ್ ಪೈ ಮಾತನಾಡಿ, ಇಂದಿನ ಕಾಲದಲ್ಲಿ ನಮ್ಮಲ್ಲಿ ಹೆಚ್ಚಿನವರು ನಮ್ಮ ಭೌತಿಕ ದೇಹದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತೇವೆ. ಮನುಷ್ಯನ ದೇಹವನ್ನು ಗಮನಿಸಿದರೆ ಮಸ್ತಿಷ್ಕವು ನಮ್ಮ ದೇಹದ ಅತ್ಯಂತ ಕಡಿಮೆ ಅರ್ಥಮಾಡಿಕೊಳ್ಳಲಾದ ಭಾಗ. ಅದಕ್ಕಿಂತಲೂ ಕಮ್ಮಿ ಅರ್ಥಮಾಡಿಕೊಂಡಿರುವುದು ನಮ್ಮ ಮನಸ್ಸನ್ನು. ಮಸ್ತಿಷ್ಕ ಮತ್ತು ಮನಸ್ಸಿನಲ್ಲಿ ಬಹುದೊಡ್ಡ ವ್ಯತ್ಯಾಸವಿದೆ ಎಂದರು.

ಮನುಷ್ಯ ಪ್ರಜ್ಞಾಪೂರ್ವಕವಾಗಿ ಕೇವಲ 10% ನಷ್ಟು ಮಾತ್ರ ತನ್ನ ಮೆದುಳಿನ ಶಕ್ತಿಯನ್ನು ಉಪಯೋಗಿಸುತ್ತಾನೆ. ಉಳಿದ 90% ಕ್ಕಿಂತಲೂ ಹೆಚ್ಚು ಶಕ್ತಿ ಸುಪ್ತಪ್ರಜ್ಞೆಯಲ್ಲಿರುತ್ತದೆ. ಈ ಸುಪ್ತಪ್ರಜ್ಞೆಯ ಶಕ್ತಿಯಿಂದಾಗಿ ನಾವು ಜೀವನದಲ್ಲಿ ಅತ್ಯುತ್ತಮವಾದುದನ್ನು ಸಾಧಿಸುತ್ತೇವೆ. ಉದಾಹರಣೆಗೆ ನಾವು ಯಾವುದೇ ಆಟ ಆಡುವಾಗ ಮೊದಲಿಗೆ ನಾವು ಪ್ರಜ್ಞಾಪೂರ್ವಕವಾಗಿ ಮಾಡುತ್ತೇವೆ, ಆದರೆ ಬರಬರುತ್ತಾ ಅದೇ ನಮ್ಮ ಅಭ್ಯಾಸವಾಗಿ ಬಿಡುತ್ತದೆ. ಇದು ನಮ್ಮ ಸುಪ್ತಪ್ರಜ್ಞೆಯಲ್ಲಿರುವುದರಿಂದ ಹಾಗಾಗುತ್ತದೆ. ದುರಾದೃಷ್ಟವಶಾತ್ ಕೆಲವು ಬೇಡದ ಅಭ್ಯಾಸಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಹೋಗುತ್ತವೆ. ತನುಜಾರವರ ಮೈಂಡ್ ಥೆರಪಿಯು ಮನಸ್ಸಿನ ಬೇಡದ ಭಾರಗಳನ್ನು ಕಳಚಿಕೊಂಡು ತನ್ನ ಅತ್ಯುತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಾಯ ಮಾಡಲಿದೆ. ಮನುಷ್ಯನಿಗೆ ಅಂತಿಮವಾಗಿ ಬೇಕಿರುವುದು ಶಾಂತಿ ಮತ್ತು ಸಂತೋಷ ಮನಸ್ಸಿಗೆ ತರಬೇತಿ ನೀಡುವುದರಿಂದ ಇದು ಸಾಧ್ಯ ಎಂದರು.

ವ್ಯಕ್ತಿತ್ವ ತರಬೇತುಗಾರ್ತಿ ತನುಜಾ ಮಾಬೆನ್ ಮಾತನಾಡಿ, ಈ ಕ್ಷೇತ್ರದಲ್ಲಿ 25 ವರ್ಷಗಳಿಂದ ತೊಡಗಿಸಿಕೊಂಡಿದ್ದು, ಹಲವಾರು ಏಳು ಬೀಳುಗಳನ್ನು ಕಂಡಿದ್ದೇನೆ. ಕಳೆದ ವರ್ಷವೂ ಒಂದು ಅಫಘಾತಕ್ಕೀಡಾಗಿದ್ದು, ಆ ಸಂದರ್ಭದಲ್ಲಿ ಈ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸುವ ನಿಟ್ಟಿನಲ್ಲಿ ಕೇಂದ್ರವನ್ನು ತೆರೆದಿದ್ದೇನೆ. ನನ್ನ ಜೀವನದ ಅನುಭವಗಳನ್ನು ಗಮದಲ್ಲಿಟ್ಟುಕೊಂಡು ನಿಮ್ಮ ಮೆದುಳನ್ನು ಮರುವಿನ್ಯಾಸಗೊಳಿಸುವ ಕೋರ್ಸ್ ಅನ್ನು ಪ್ರಾರಂಭಿಸಿ ಜನರು ತಮ್ಮ ಹೊಸ ಆವೃತ್ತಿಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಿದ್ದೇನೆ ಎಂದರು.

ಶಿಕ್ಷಣತಜ್ಞೆ ಕೋಮಲ್ ಜೆನಿಫರ್ ಡಿ’ಸೋಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.