‘ತಮಿಳ್ರಾಕರ್ಸ್’ ಈ ಶಬ್ಧ ಕೇಳಿದೊಡನೇ ಭಾರತೀಯ ಚಿತ್ರರಂಗ ತಲ್ಲಣಗೊಳ್ಳುತ್ತದೆ. ಅಷ್ಟರ ಮಟ್ಟಿಗೆ ಚಿತ್ರದೋದ್ಯಮಕ್ಕೆ ನಡುಕ ಹುಟ್ಟಿಸಿದೆ. ತಮಿಳ್ರಾಕರ್ಸ್ ವೆಬ್ಸೈಟ್ ಜಗತ್ತಿನ ಯಾವುದೇ ಮೂಲೆಯಲ್ಲಿ, ಯಾವುದೆ ಹೊಸ ಚಿತ್ರ ಬಿಡುಗಡೆಗೊಂಡರು ತನ್ನ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿಬಿಡುತ್ತದೆ. ಚಿತ್ರದ ಎಚ್ಡಿ ಪ್ರಿಂಟ್, ಥಿಯೇಟರ್ ಪ್ರಿಂಟ್ಗಳನ್ನು ಈ ವೆಬ್ಸೈಟ್ ಪೈರಸಿ ಮಾಡುತ್ತದೆ. ತಮಿಳ್ರಾಕರ್ಸ್ ಒಂದೆಡೇ ಖ್ಯಾತಿ ಮತ್ತು ಕುಖ್ಯಾತಿ ಎರಡನ್ನುಗಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ತಮಿಳ್ರಾಕರ್ಸ್ಗೆ ದೊಡ್ಡ ಅಭಿಮಾನಿ ಪಡೆ ಹುಟ್ಟಿಕೊಂಡಿರುವುದು ಆತಂಕಕಾರಿ ಬೆಳವಣಿಗೆ. ಹಾಲಿವುಡ್, ತೆಲುಗು, ತಮಿಳು, ಮಲೆಯಾಳಂ, ಕನ್ನಡ, ಹಿಂದಿ ಚಿತ್ರರಂಗ ತಮಿಳ್ರಾಕರ್ಸ್ನಿಂದ ಕಂಗಾಲಾಗಿದೆ. ಯಾವುದೇ ಹೊಸ ಚಿತ್ರ ಬಿಡುಗಡೆಗೊಂಡರು ಕ್ಷಣಾರ್ಧದಲ್ಲಿ ಕದ್ದುಬಿಡುತ್ತಾರೆ ಈ ಖದೀಮರು.
ಅವೆಂಜರ್ಸ್ನ್ನೇ ಬಿಟಿಲ್ಲ
ಬಿಡುಗಡೆ ಮುನ್ನ ಬಾರಿ ನಿರೀಕ್ಷೆ ಮೂಡಿಸಿದ್ದ ಸಾವಿರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಅವೆಂಜರ್ಸ್ ಸಿನಿಮವನ್ನೇ ಈ ತಮಿಳ್ ರಾಕರ್ಸ್ ಖದೀಮರು ಬಿಟ್ಟಿಲ್ಲ. ಬಿಡುಗಡೆಯಾದ ಅವೆಂಜರ್ಸ್ ಸಿನಿಮವನ್ನು ಉತ್ತಮ ಗುಣಮಟ್ಟದ ಪ್ರತಿಯಲ್ಲೇ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದರು. ಅಲ್ಲದೇ ಎಲ್ಲಾ ಬಿಗ್ಬಜೆಟ್ ಹಾಲಿವುಡ್, ಭಾರತೀಯ ಚಿತ್ರಗಳನ್ನು ಬಿಡುಗಡೆ ದಿನದಂದೆ ಕದ್ದು ವೆಬ್ಸೈಟ್ಗೆ ಹಾಕಲಾಗುತ್ತದೆ. ಹಿಂದಿಯ ಸಲ್ಮಾನ್ ಖಾನ್ ಅಭಿನಯದ ಭಾರತ್, ಹಾಲಿವುಡ್ನ ಅಕ್ವಮ್ಯಾನ್, ಕ್ಯಾಪ್ಟನ್ ಮಾರ್ವಲ್, ಶಾಝಂ, ಗಾಡ್ಜಿಲ್ಲಾ ದಿ ಮಾನ್ಸ್ಟರ್, ಬಹುಭಾಷ ತೆರೆಕಂಡ ಕೆಜಿಎಫ್ ಸಿನಿಮವನ್ನು ಇವರು ಪೈರಸಿ ಮಾಡಿದ್ದರು. ಆರಂಭದಲ್ಲಿ ಥಿಯೆಟರ್ ಪ್ರಿಂಟ್ನಲ್ಲಿ ಪೈರಸಿ ಮಾಡಿದರೆ, 15-20 ದಿನಗಳಲ್ಲಿ ಎಚ್ಡಿ ಪ್ರಿಂಟ್ ಅಪ್ಲೋಡ್ ಮಾಡುತ್ತಾರೆ.
ಕೋಟಿ, ಕೋಟಿ ರೂ ಸಂಪಾದನೆ :
ಕಂಪ್ಯೂಟರ್ ಭಾಷೆಯಲ್ಲಿ ಇದಕ್ಕೆ ಡಾರ್ಕ್ವೆಬ್ ದಂದೆ ಎನ್ನಲಾಗುತ್ತದೆ. ಇದಕ್ಕೆ ಬಲಿಯಾಗಿರುವುದು ಮಾತ್ರ ಚಿತ್ರರಂಗ. ಇದೊಂದು ಕೋಟ್ಯಾಂತರ ರೂ ಹಣಗಳಿಸುವ ದೊಡ್ಡ ದಂದೆ. ತಮಿಳ್ರಾಕರ್ಸ್ ಮಾದರಿಯಲ್ಲಿ ಹಲವು ವೆಬ್ಸೈಟ್ಗಳು ಈ ದಂದೆಯಲ್ಲಿ ತೊಡಗಿಸಿಕೊಂಡಿದೆಯಾದರು, ತಮಿಳ್ರಾಕರ್ಸ್ ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿದೆ. ಹೊಸ ಚಿತ್ರ ನೋಡುವ ಆಸೆಗಾಗಿ ಸಾಕಷ್ಟು ಮಂದಿ ಈ ವೆಬ್ಸೈಟ್ ಪ್ರವೇಶಿಸುತ್ತಾರೆ. ವೆಬ್ಸೈಟ್ನಲ್ಲಿರುವ ಚಿತ್ರದ ಮೇಲೆ ಕ್ಲಿಕ್ಕಿಸಿದಾಗ ಕೆಲವು ಪಾಪ್-ಅಪ್ ಲಿಂಕ್ಸ್( ಅನ್ವಾಂಟೆಡ್ ಗೇಮ್ಸ್, ಪೋರ್ನ್, ಮಾರ್ಕೆಟಿಂಗ್ ಪ್ರಮೋಷನಲ್ ವೆಬ್ಸೈಟ್ಸ್ ) ತೆರೆದುಕೊಳ್ಳುತ್ತದೆ. ಇದೊಂದು ಜಾಹಿರಾತು ಯೋಜನೆಯಾಗಿದ್ದು, ಈ ವೆಬ್ಸೈಟ್ಗಳು ಇಂತಿಷ್ಟು ಮೊತ್ತದ ಹಣವನ್ನು ತಮೀಳ್ರಾಕರ್ಸ್ ಅಡ್ಮಿನ್ಗಳಿಗೆ ಪಾವತಿ ಮಾಡುತ್ತಾರೆ ಎಂದು ಕಂಪ್ಯೂಟರ್ ತಜ್ಞರು ಹೇಳುತ್ತಾರೆ.
ಚಿತ್ರರಂಗದ ಆಕ್ರೋಶ
ತಮಿಳ್ರಾಕರ್ಸ್ ಹಾವಳಿಯಿಂದ ಚಿತ್ರರಂಗ ತತ್ತರಿಸಿದ್ದು, ತಮಿಳುನಾಡು, ಕಳೆದ ಮೂರ್ನಾಲ್ಕು ವರ್ಷದಿಂದ ಕರ್ನಾಟಕ, ಮಹಾರಾಷ್ಟ್ರ, ಆಂದ್ರ, ಕೇರಳದಲ್ಲಿ ಈ ಬಗ್ಗೆ ಚಿತ್ರರಂಗ, ಕಲಾವಿದರು, ತಂತ್ರಜ್ಞರು ಪ್ರತಿಭಟನೆ, ಆಕ್ರೋಶ ವ್ಯಕ್ತಪಡಿಸುತಿದ್ದಾರೆ. ಚೆನ್ನೈನಲ್ಲಿ ನಟ ವಿಶಾಲ್ ನೇತೃತ್ವದಲ್ಲಿ ದೊಡ್ಡ ಪ್ರತಿಭಟನೆಯೆ ನಡೆದಿದೆ ಆದರೆ ಇದುವರೆಗೆ ತಮಿಳ್ರಾಕರ್ಸ್ ಬಂದ್ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಹಲವಾರು ದೂರುಗಳು ದಾಖಲಾಗಿದೆ. ಇತ್ತೀಚೆಗೆ ಚೆನ್ನೈ ಮತ್ತು ಕೇರಳದಲ್ಲಿ ಇದರ ಅಡ್ಮಿನ್ಗಳನ್ನು ಬಂಧಿಸಲಾಗಿದೆ ಎಂದು ಸುದ್ದಿ ಪ್ರಸಾರವಾಗಿತ್ತು. ಆದರೆ ಅವರು ಈ ವೆಬ್ಸೈಟ್ಗಳ ಅಡ್ಮಿನ್ಗಳಲ್ಲ, ಸಮಾನ್ಯ ಏಜೆಂಟ್ಗಳು ಎಂದು ವಿಚಾರಣೆಯಿಂದ ತಿಳಿದು ಬಂದ ಬಳಿಕ ಪೊಲೀಸ್ ಇಲಾಖೆಯೆ ಬೆಚ್ಚು ಬೀಳುವಂತಾಯಿತು.
ಬ್ಲಾಕ್ ಮಾಡಲು ಸಾಧ್ಯವೆ ಇಲ್ಲ
ಗೂಗಲ್ ಸಂಸ್ಥೆ ತಮೀಳ್ರಾಕರ್ಸ್ನ್ನು ಬ್ಲಾಕ್ ಮಾಡಿದರು ಮತ್ತೆ ಇನೊಂದು ಅವತಾರದಲ್ಲಿ ತೆರೆದುಕೊಳ್ಳುತ್ತದೆ. ಪ್ರೊಕ್ಸಿ ಸೈಟ್(ವಿದೇಶಿ ಸರ್ಚಿಂಗ್ವೆಬ್ಸೈಟ್) ಗಳಲ್ಲಿ ತನ್ನ ವೆಬ್ಸೈಟ್ ಲಿಂಕ್ ತೆರೆದುಕೊಳ್ಳುವಂತೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ತಮಿಳ್ರಾಕರ್ಸ್ ಹೆಸರಿನ ಒಂದು ವೆಬ್ಸೈಟ್ನಲ್ಲಿ ಸಾವಿರಾರು ಪೇಜ್ಗಳು ಹುಟ್ಟಿಕೊಂಡಿದೆ. ಒಂದು ಬ್ಲಾಕ್ ಆದರೆ ಇನ್ನೊಂದರಲ್ಲಿ ತೆರೆದುಕೊಳ್ಳುವಂತೆ ಡಾಮೆನ್ಗಳನ್ನು ಸೃಷ್ಟಿಸಿ ಪೇಜ್ ಕ್ರಿಯೇಟ್ ಮಾಡಲಾಗಿದೆ. ಇದೆಲ್ಲವು ಬಹುತೇಕ ವಿದೇಶಗಳಲ್ಲಿ ಆಪರೇಟ್ ಆಗುವುದರಿಂದ ಇದರ ನಿಯಂತ್ರಣ ಕಷ್ಟ ಸಾಧ್ಯ ಎನ್ನುತ್ತಾರೆ ಕಂಪ್ಯೂಟರ್ ತಜ್ಞರು.
ಹೊಸ ಚಿತ್ರಗಳು ಹೇಗೆ ಸಿಗುತ್ತದೆ ?
ಇತ್ತೀಚಿನ ವರ್ಷಗಳಲ್ಲಿ ಕನ್ನಡ, ಹಿಂದಿ ಸೇರಿದಂತೆ ದಕ್ಷಿಣ ಭಾರತದ ಚಿತ್ರಗಳು ವಿದೇಶಗಳಲ್ಲಿ ಹೆಚ್ಚು ಬಿಡುಗಡೆಯಾಗುತ್ತದೆ. ವಿದೇಶದ ಚಿತ್ರ ಮಂದಿರಗಳಲ್ಲಿ ಹಣದ ಪ್ರಭಾವ ಬಳಸಿ ಬಹಳ ಸುಲಭವಾಗಿ ಚಿತ್ರದ ನಕಲು ಪಡೆದು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಚಿತ್ರ ನಿರ್ಮಾಣಗೊಂಡು ಬಿಡುಗಡೆ ಮುನ್ನ ಕೊನೆಯ ಎಡಿಟಿಂಗ್ ಹಂತದಲ್ಲಿ ಚಿತ್ರವನ್ನು ಸೋರಿಕೆ ಮಾಡುವಲ್ಲಿ ತಮೀಳ್ರಾಕರ್ಸ್ ನಿಸ್ಸೀಮರು.