ಕೊಲ್ಲೂರಿಗೆ ಪ್ರಯಾಣ ಬೆಳೆಸಿದ ತಮಿಳುನಾಡು ಸಿಎಂ ವಿಜಯ್‌: ಜೈಕಾರ ಹಾಕಿ ಸ್ವಾಗತಿಸಿದ ಅಭಿಮಾನಿಗಳು!

ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುವ ಸಲುವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.

ಈ ಸಂದರ್ಭದಲ್ಲಿ ರಾಜ್ಯದ ಆರೋಗ್ಯ ಸಚಿವ ಯು.ಟಿ. ಖಾದ‌ರ್ ಅವರು ಮುಖ್ಯಮಂತ್ರಿ ವಿಜಯ್ ಅವರನ್ನು ಬರಮಾಡಿಕೊಂಡು ಸಾಥ್ ನೀಡಿದರು. ಬಳಿಕ ವಿಜಯ್ ರಸ್ತೆ ಮಾರ್ಗವಾಗಿ ಕೊಲ್ಲೂರಿನತ್ತ ಪ್ರಯಾಣ ಬೆಳೆಸಿದರು.

ಮಂಗಳೂರು-ಉಡುಪಿ-ಕೊಲ್ಲೂರು ಮಾರ್ಗದುದ್ದಕ್ಕೂ ರಸ್ತೆಯ ಬದಿಯಲ್ಲಿ ನೆರೆದಿದ್ದ ಅಭಿಮಾನಿಗಳು ಮುಖ್ಯಮಂತ್ರಿ ವಿಜಯ್ ಅವರಿಗೆ ಜೈಕಾರ ಹಾಕಿ ಸ್ವಾಗತಿಸಿದರು. ಹಲವೆಡೆ ಅಭಿಮಾನಿಗಳು ಕೈಬೀಸಿ ಶುಭ ಕೋರಿದರೆ, ವಿಜಯ್ ಕೂಡ ವಾಹನದಿಂದಲೇ ಅಭಿಮಾನಿಗಳತ್ತ ಕೈಬೀಸಿ ಪ್ರತಿಕ್ರಿಯಿಸಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿಜಯ್ ಅವರ ಆಗಮನದಿಂದ ಅಭಿಮಾನಿಗಳಲ್ಲಿ ಸಂಭ್ರಮದ ವಾತಾವರಣ ಕಂಡುಬಂತು.