ಇದು ಮಾತ್ರೆ ಕಾಗದ ಅಲ್ಲ ಮದುವೆ ಆಮಂತ್ರಣ: ತಮಿಳುನಾಡಿನ ಔಷಧಿಕಾರ ಜೋಡಿಯ ವಿನೂತನ ಮದುವೆ ಪತ್ರಿಕೆ

ಚೆನ್ನೈ: ತಮಿಳುನಾಡಿನ ಔಷಧಿಕಾರ ಜೋಡಿಯೊಂದು ವಿಶಿಷ್ಟವಾದ ಮದುವೆಯ ಆಮಂತ್ರಣ ಪತ್ರವನ್ನು ಮುದ್ರಣ ಮಾಡಿದ್ದಾರೆ. ತಮ್ಮ ಸೃಜನಾತ್ಮಕ ಚಿಂತನೆಯನ್ನು ಓರೆಗೆ ಹಚ್ಚಿರುವ ತಿರುವಣ್ಣಾಮಲೈ ದಂಪತಿಗಳು ಥೇಟ್ ಮಾತ್ರೆ ಕಾಗದದ ಹಿಂಭಾಗದಂತೆಯೇ ಕಾಣುವ ತಮ್ಮ ಮದುವೆ ಆಹ್ವಾನ ಪತ್ರವನ್ನು ವಿನ್ಯಾಸಗೊಳಿಸಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಟ್ವಿಟರ್ ಬಳಕೆದಾರರಾದ ಹರ್ಷ್ ಗೋಯೆಂಕಾ ಅವರು ಹಂಚಿಕೊಂಡಿರುವ ಆಹ್ವಾನ ಪತ್ರಿಕೆಯು ‘ಎಜಿಲರಸನ್ ಮತ್ತು ವಸಂತಕುಮಾರಿ ವಿವಾಹ’ ಎಂಬ ದಪ್ಪ ಅಕ್ಷರಗಳನ್ನು ತೋರಿಸುತ್ತದೆ. ಫಕ್ಕನೆ ನೋಡಿದರೆ ಇದೊಂದು ಮಾತ್ರೆ ಕಾಗದವೋ ಎನ್ನುವ ಭಾವನೆ ಬರುತ್ತದೆ.

‘ಎಲ್ಲಾ ಸ್ನೇಹಿತರು ಮತ್ತು ಸಂಬಂಧಿಕರು. ನನ್ನ ಮದುವೆ ಕಾರ್ಯಕ್ರಮವನ್ನು ಮಿಸ್ ಮಾಡಿಕೊಳ್ಳಬೇಡಿ’ ಎಂದು ಎಚ್ಚರಿಕೆ ವಿಭಾಗದಡಿ ಮುದ್ರಿಸಲಾಗಿದೆ. ತಮ್ಮ ಪೋಷಕರ ಹೆಸರನ್ನು ‘ತಯಾರಿಸಲಾಗಿದೆ’ (ಮಾನ್ಯುಫ್ಯಾಕ್ಛರ್ಡ್)ವಿಭಾಗದ ಅಡಿಯಲ್ಲಿ ಬರೆದಿದ್ದಾರೆ. ಒಂದು ವಿಭಾಗವು ಮದುವೆಯ ಸ್ಥಳದ ಮಾಹಿತಿಯನ್ನು ಒಳಗೊಂಡಿದೆ. ಥೀಮ್ ಅನ್ನು ಅನುಸರಿಸಿ, ದಂಪತಿಗಳು ದಿನಾಂಕ ಮತ್ತು ಸಮಯವನ್ನು ಆಮಂತ್ರಣದಲ್ಲಿ ಲಂಬವಾಗಿ ಸೇರಿಸಿದ್ದಾರೆ.

ವಿಶೇಷವೆಂದರೆ ಎಜಿಲರಸನ್ ಎಂ.ಫಾರ್ಮಾ ಮಾಡಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ ಮತ್ತು ವಸಂತಕುಮಾರಿ ಎಂ.ಎಸ್ಸಿ ನರ್ಸಿಂಗ್ ಮಾಡಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಇವರಿಬ್ಬರೂ ಪ್ರತ್ಯೇಕ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ವೃತ್ತಿಗೆ ಸರಿಹೊಂದುವಂತೆ ಮದುವೆ ಆಮಂತ್ರಣ ಪತ್ರಿಕೆಯನ್ನು ಮುದ್ರಣ ಮಾಡಿ ನೆಟ್ಟಿಗರನ್ನು ಬೆರಗಾಗಿಸಿದ್ದಾರೆ.