ಹೈದರಾಬಾದ್: ತಮಿಳು ಚಿತ್ರರಂಗದಲ್ಲಿ ಪ್ರಮುಖ ಪಾತ್ರಗಳಿಗೆ ಹೆಸರಾದ ಹಿರಿಯ ನಟ ಶರತ್ ಬಾಬು ಸೋಮವಾರ ಹೈದರಾಬಾದ್ನಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಹೈದರಾಬಾದ್ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಟ ಸಾವನ್ನಪ್ಪಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಶರತ್ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
ವರದಿಗಳ ಪ್ರಕಾರ, ಶರತ್ ಬಾಬು ಅವರು ಅನಾರೋಗ್ಯದ ಕಾರಣ ಕಳೆದ ತಿಂಗಳು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಅವರ ಸ್ಥಿತಿ ಹದಗೆಟ್ಟ ನಂತರ ಹೈದರಾಬಾದ್ಗೆ ಸ್ಥಳಾಂತರಿಸಲಾಯಿತು. ಇದೀಗ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರು ಎಳೆದಿದ್ದಾರೆ.
1973ರಲ್ಲಿ ಸಿನಿಮಾ ರಂಗ ಪ್ರವೇಶಿಸಿದ ಸತ್ಯಂ ಬಾಬು ದೀಕ್ಷಿತುಲು ತಮಿಳು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಸೇರಿದಂತೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು 1973ರಲ್ಲಿ ತೆಲುಗಿನ ರಾಮರಾಜ್ಯಂ ಚಿತ್ರ ಮೂಲಕ ಸಿನಿಮಾ ರಂಗಕ್ಕೆ ಕಾಲಿರಿಸಿದ್ದರು.
ಕನ್ನಡದಲ್ಲಿ ಇವರು ನಟಿಸಿದ್ದ ಅಮೃತವರ್ಷಿಣಿ ಚಿತ್ರ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಕನ್ನಡದಲ್ಲಿ ತುಳಸಿದಳ, ರಣಚಂಡಿ, ಶಕ್ತಿ, ಕಂಪನ, ಗಾಯ, ಹೃದಯ-ಹೃದಯ, ನೀಲ, ನಮ್ಮೆಜಮಾನ್ರು ಸಿನಿಮಾಗಳಲ್ಲಿ ಇವರು ನಟಿಸಿದ್ದರು.
ಇವರು ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ ತೆಲುಗಿನ ʼವಕೀಲ್ ಸಾಬ್ʼ.
ಚಿತ್ರರಂಗದ ಸಹೋದ್ಯೋಗಿಗಳು ಮತ್ತು ಪ್ರಪಂಚದಾದ್ಯಂತದ ಅಭಿಮಾನಿಗಳು ಶರತ್ ಬಾಬು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ