ಚೆನ್ನೈ: ಪ್ರಖ್ಯಾತ ತಮಿಳು ಚಿತ್ರ ನಟ ಚಿಯಾನ್ ವಿಕ್ರಂಗೆ ಹೃದಯಾಘಾತವಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮುಂಜಾನೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕುಟುಂಬ ನೀಡಿರುವ ಮಾಹಿತಿ ಪ್ರಕಾರ ವಿಕ್ರಂಗೆ ಲಘು ಹೃದಯಾಘಾತವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈದ್ಯಾಧಿಕಾರಿಗಳು ವಿಕ್ರಂಗೆ ಚಿಕಿತ್ಸೆ ನೀಡುತ್ತಿದ್ದು, ಸಂಜೆಯೇ ಬಿಡುಗಡೆ ಹೊಂದುವ ಸಾಧ್ಯತೆಯೂ ಇದೆ ಎನ್ನಲಾಗಿದೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದು, ಇದಕ್ಕೆ ವಿಕ್ರಂ ಅವರ ಮ್ಯಾನೇಜರ್ ಸ್ಪಷ್ಟೀಕರಣ ನೀಡಿದ್ದಾರೆ.
“ಚಿಯಾನ್ ವಿಕ್ರಮ್ ಅವರಿಗೆ ಎದೆಯಲ್ಲಿ ಸ್ವಲ್ಪ ಅಸ್ವಸ್ಥತೆ ಇತ್ತು ಮತ್ತು ಅದಕ್ಕಾಗಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ವರದಿಗಳು ಹೇಳುವಂತೆ ಅವರಿಗೆ ಹೃದಯಾಘಾತವಾಗಿರಲಿಲ್ಲ. ಈ ರೀತಿಯ ವದಂತಿಗಳನ್ನು ಕೇಳಿ ನಮಗೆ ನೋವಾಗಿದೆ. ನಮ್ಮ ಪ್ರೀತಿಯ ಚಿಯಾನ್ ಈಗ ಚೆನ್ನಾಗಿದ್ದಾರೆ. ಒಂದು ದಿನದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಈ ಸಮಯ ಅವರಿಗೆ ಮತ್ತು ಅವರ ಕುಟುಂಬಕ್ಕೆ ಏಕಾಂತ ಬೇಕಾಗಿದೆ. ಈ ಹೇಳಿಕೆಯು ಸ್ಪಷ್ಟತೆಯನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ಸುಳ್ಳು ವದಂತಿಗಳನ್ನು ನಿಲ್ಲಿಸಲಾಗುವುದು ಎಂದು ನಂಬುತ್ತೇವೆ.” ಎಂದು ವಿಕ್ರಂ ಅವರ ಮ್ಯಾನೇಜರ್ ಸೂರ್ಯನಾರಾಯಣ್ ಎಂ ಟ್ವಿಟರ್ ನಲ್ಲಿ ಹೇಳಿದ್ದಾರೆ.
ವಿಕ್ರಂ ಬಹುನಿರೀಕ್ಷಿತ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದು, ಇಂದು ಸಂಜೆ 6 ಗಂಟೆಗೆ ಟೀಸರ್ ಬಿಡುಗಡೆಯಾಗಲಿದೆ. ಆದರೆ ಇದೀಗ ವಿಕ್ರಂ ಆಸ್ಪತ್ರೆಯಲ್ಲಿದ್ದು, ಟೀಸರ್ ಬಿಡುಗಡೆ ಸಮಯದಲ್ಲಿ ಹಾಜರಿರಲಾಗುವುದಿಲ್ಲ. ಮಣಿರತ್ನಂ ನಿರ್ದೇಶನದ ಬಹುಕೋಟಿ ವೆಚ್ಚದ ಬಹು ತಾರಾಗಣದ ಈ ಚಿತ್ರದ ಮೇಲೆ ಎಲ್ಲರ ಕಣ್ಣು ನೆಟ್ಟಿವೆ.