ಚುನಾವಣಾ ಜಾಗೃತಿ ಕುರಿತು ತಾಲೂಕು ಮಟ್ಟದ ಭಿತ್ತಿ ಚಿತ್ರಕಲಾ ಸ್ಪರ್ಧೆ

ಉಡುಪಿ: ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾ ಚುನಾವಣಾ ಜಾಗೃತಿ (ಸ್ವೀಪ್) ಕಾರ್ಯಕ್ರಮದಡಿ ತಾಲೂಕು ಮಟ್ಟದ ಸಾರ್ವಜನಿಕ ಭಿತ್ತಿ ಚಿತ್ರಕಲಾ ಸ್ಪರ್ಧೆಯು ಮಾರ್ಚ್ 24 ರಂದು ಪ್ರತಿ ತಾಲೂಕು ಕೇಂದ್ರಗಳ ನಿರ್ದಿಷ್ಟ ಮತದಾನ ಕೇಂದ್ರಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ಸ್ಪರ್ಧೆ ನಡೆಯಲಿದೆ.

ಸಾರ್ವಜನಿಕರಿಗೆ ಮಾರ್ಚ್ 10 ರಿಂದ ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು ಗೂಗಲ್ ಫಾರ್ಮ್ ಮೂಲಕ ಅವಕಾಶ ಕಲ್ಪಿಸಲಾಗಿದೆ.

ನಿಯಮಗಳು: ಚಿತ್ರಗಳನ್ನು ಮತದಾನ ಕೇಂದ್ರದ ಗೋಡೆಗಳಲ್ಲಿ ರಚಿಸಬೇಕು. ಸ್ಪರ್ಧೆಯಲ್ಲಿ ಚಿತ್ರ ರಚಿಸಲು ಅವಶ್ಯವಿರುವ ಬಣ್ಣಗಳನ್ನು ಸ್ವೀಪ್ ಸಮಿತಿಯಿಂದ ಒದಗಿಸಲಾಗುವುದು. ಚಿತ್ರ ರಚನೆಗಳಿಗೆ ಅಗತ್ಯವಿರುವ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು.

ಪ್ರತಿ ತಾಲೂಕು ಚುನಾವಣಾ ಮತದಾನ ಕೇಂದ್ರಗಳಲ್ಲಿ ಚುನಾವಣಾ ಜಾಗೃತಿ ಭಿತ್ತಿ ಚಿತ್ರಸ್ಪರ್ಧೆ ನಡೆಯಲಿದ್ದು, ಒಂದು ಮತಗಟ್ಟೆಗೆ 2 ಜನ ಕಲಾವಿದ ಸ್ಪರ್ಧಿಗಳನ್ನು ಹಂಚಿಕೆ ಮಾಡಲಾಗುವುದು. ಕಲಾವಿದರು ಒಟ್ಟಿಗೆ (2 ಜನ) ಹೆಸರು ನೀಡಬಹುದು. ಯಕ್ಷಗಾನ, ಕಂಬಳ, ಉಡುಪಿಯ ಪ್ರಸಿದ್ಧ ಸೀರೆ (ಕೈಮಗ್ಗ ಸೀರೆಗಳು) ವಿಷಯಗಳನ್ನು ಪ್ರಧಾನವಾಗಿಟ್ಟುಕೊಂಡು ಉಳಿದಂತೆ ಕುಂಬಾರಿಕೆ, ಬುಟ್ಟಿ ಹೆಣೆಯುವುದು, ಬತ್ತ ಕುಟ್ಟುವುದು, ಕಮ್ಮಾರಿಕೆ, ಕೈ ಮಗ್ಗ ಇತ್ಯಾದಿ ಜಾನಪದ ಕಲೆಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಬಹುದು. ನೈಜ, ವರ್ಲಿ ಅಥವಾ ಸೃಜನಾತ್ಮಕ ಭಿತ್ತಿ ಚಿತ್ರಗಳನ್ನು ತಿಳಿಸಲಾಗುವ ಗೋಡೆಗಳ ಮೇಲೆ ರಚಿಸಬೇಕು.

ಭಿತ್ತಿ ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರು ಭಾಗವಹಿಸಬಹುದಾಗಿದ್ದು, ರಾಜಕೀಯ ಪಕ್ಷದ ಚಿಹ್ನೆ ಹಾಗೂ ಬರಹಗಳಿಗೆ ಅವಕಾಶವಿರುವುದಿಲ್ಲ.

ತಾಲೂಕು ಮಟ್ಟದ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನವಾಗಿ 8,000 ರೂ., ದ್ವಿತೀಯ 6,000 ರೂ., ತೃತೀಯ 4,000 ರೂ., 2 ಸಮಾಧಾನಕರ ಬಹುಮಾನವಾಗಿ ತಲಾ 2,000 ರೂ. ಹಾಗೂ ನೆನಪಿನ ಕಾಣಿಕೆ ಜೊತೆಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಶಂಸನಾ ಪ್ರಮಾಣ ಪತ್ರ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಮೊ.ನಂ. 9880505271, 9481971071 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.