ತಲ್ಲೂರು ಶಿವರಾಮ್ ಶೆಟ್ಟಿ ಇವರಿಗೆ ಕರ್ನಾಟಕ ಜಾನಪದ ವಿವಿ ಗೌರವ ಡಾಕ್ಟರೇಟ್

ಉಡುಪಿ: ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಅರೆಮಲ್ಲಾಪುರದ ಜಾನಪದ ಕಲಾವಿದ ಕೆಂಚಪ್ಪ ನಾಗರಾಜಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಜೀವನ್ ರಾಮ್, ಉಡುಪಿಯ ಯಕ್ಷಗಾನ ಕಲಾವಿದ ತಲ್ಲೂರು ಶಿವರಾಮ ಶೆಟ್ಟಿ, ಹುಬ್ಬಳ್ಳಿಯ ರಂಗಕರ್ಮಿ ಯಶವಂತ ಸರದೇಶಪಾಂಡೆ,ಗದಗ ಜಿಲ್ಲೆಯ ಗಂಗಿಮಾದಿನಗರದ ಬಸವರಾಜ ಕೆಂಚಿಗೇರಿ ವೆಂಕಪ್ಪ ಅಂಬಾಜಿ ಸುಗೇಟ್ಕರ್ (ಬಾಗಲಕೋಟ ಜಿಲ್ಲೆ), ಇವರಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದೆ ಎಂದು ವಿವಿ ಉಪಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಸೋಮವಾರದಂದು ತಿಳಿಸಿದ್ದಾರೆ.

ಡಾ.ತಲ್ಲೂರು ಶಿವರಾಮ ಶೆಟ್ಟಿ ಇವರು ಪ್ರಸ್ತುತ ಉಡುಪಿ ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ, ರಂಗಭೂಮಿ ಉಡುಪಿ ಇದರ ಅಧ್ಯಕ್ಷರಾಗಿ, ಲಯನ್ಸ್‌ ಜಿಲ್ಲೆ 317ಸಿ ಇದರ ಜಿಲ್ಲಾ ಗವರ್ನರ್‌ ಆಗಿ ಸೇವೆ ಸಲ್ಲಿಸುತ್ತಿರುವುದಲ್ಲದೆ, ಹಲವಾರು ಸಂಘ ಸಂಸ್ಥೆಗಳಲ್ಲಿ ಮತ್ತು ಸಮಾಜ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸಮಾಜ ಸೇವೆಗಾಗಿ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಬೆಳಗಾವಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಅವರು ಸಮಾಜ ಸೇವೆಗಾಗಿ ಕೊಡಮಾಡುವ ‘ಸಿರಿಗನ್ನಡ’ ರಾಷ್ಟ್ರೀಯ ಪ್ರಶಸ್ತಿಯೂ ಇವರಿಗೆ ದೊರಕಿರುತ್ತದೆ.

ಡಿಸೆಂಬರ್ 1 ರಂದು ವಾರ್ಸಿಟಿ ಕ್ಯಾಂಪಸ್‌ನಲ್ಲಿರುವ ಹಿರೇತಿಟ್ಟು ಬಯಲು ರಂಗಮಂದಿರದಲ್ಲಿ 6 ಮತ್ತು 7 ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದವಿಗಳನ್ನು ಪ್ರದಾನ ಮಾಡಲಿದ್ದಾರೆ.