ಇದು UDUPI XPRESS”ಬಣ್ಣದ ಕನಸುಗಾರರು” ಸರಣಿಯ 6 ನೇ ಕಂತು. ಈ ಸರಣಿಯಲ್ಲಿ ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಈ ಸಂಚಿಕೆಯಲ್ಲಿ ಉಡುಪಿಯ ವಾದ್ಯ ನುಡಿಸುತ್ತಲೇ ಮೋಡಿ ಮಾಡುವ ನಿತಿನ್ ಶೇರಿಗಾರ್ ಕತೆ.
ಕೆಲಸಕ್ಕಾಗಿ ಹುಟ್ಟೂರು ಬಿಟ್ಟು, ಬೆಂಗಳೂರಿನಂಥ ಮಹಾನಗರ ಸೇರಿಕೊಳ್ಳುವುದು ಈ ಕಾಲದಲ್ಲಿ ಸರ್ವೇಸಾಮಾನ್ಯ. ಊರಿನಲ್ಲೇ ಕೆಲಸ ಮಾಡುತ್ತೇನೆ ಅನ್ನುವವರು ಸಿಕ್ಕರೂ ಅವರು ಕುಲಕಸುಬು ಮಾಡುತ್ತಾರೆ ಎಂದು ಬಯಸುವುದು ಕಷ್ಟ. ಕುಲಕಸುಬು ಹೆಚ್ಚು ಲಾಭದಾಯಕ ಆಗಿದ್ದರೂ ಪ್ರತಿಷ್ಠೆ, ವೈಟ್ ಕಾಲರ್ ಜಾಬ್ ಎಂಬ ಯೋಚನೆಯಲ್ಲಿ ಕಂಪೆನಿ ಕೆಲಸಕ್ಕೆ ಸೇರಿಬಿಡುತ್ತಾರೆ. ಸಂಬಳ ಕಡಿಮೆಯಾದರೂ ಅಲ್ಲಿಯೇ ದುಡಿಯುತ್ತಾರೆ.
ಹಾಗೆಂದು ಊರಿನಲ್ಲಿ ಕೆಲಸ ಮಾಡುವುದು ಅಥವಾ ಕುಲಕಸುಬು ಮುನ್ನಡೆಸುವುದು ಒಳ್ಳೆಯದಲ್ಲ, ಪ್ರಯೋಜನವಿಲ್ಲ ಎಂದು ತಿಳಿಯಬೇಕಾಗಿಲ್ಲ. ಮಾಡುವ ಕಾರ್ಯದಲ್ಲಿ ಪ್ರೀತಿ, ನಿಷ್ಠೆ, ಆಸಕ್ತಿ ಇದ್ದರೆ ಔನ್ನತ್ಯ ಸಾಧಿಸಬಹುದು ಎಂಬುದಕ್ಕೆ ಬಣ್ಣದ ಕನಸುಗಾರ ನಿತಿನ್ ಶೇರಿಗಾರ್ ಒಂದು ಸಣ್ಣ ನಿದರ್ಶನ.
ತಮ್ಮ ಕುಲವೃತ್ತಿಯಾದ ವಾದ್ಯ ವಾದನದ ಜೊತೆಗೆ, ಬಡಗಬೆಟ್ಟು ಕ್ರೆಡಿಟ್ ಕೊ ಆಪರೇಟಿವ್ ಬ್ಯಾಂಕಿನಲ್ಲಿ ಕೆಲಸ. ಎರಡನ್ನೂ ಸರಿದೂಗಿಸಿಕೊಂಡು ಉತ್ತಮ ಹೆಸರುಗಳಿಸಿ ಬೆಳೆಯುತ್ತಿದ್ದಾರೆ ನಿತಿನ್ ಶೇರಿಗಾರ್. ಉಡುಪಿಯ ಅಲೆವೂರಿನವರಾದ ಇವರು ನಾಗಸ್ವರ ಮತ್ತು ಸ್ಯಾಕ್ಸೊಫೋನ್ ನುಡಿಸಬಲ್ಲರು. ಕಿರು ವಯಸ್ಸಿನಲ್ಲಿ ಕಲಿತು, ಬೆಳೆಯುತ್ತಿರುವ ಈ ಪಯಣದ ಕುರಿತು ಇಂದಿನ ಸಂಚಿಕೆ.
ಮೊದಲ ಕಲಿಕೆಯ ಹೆಜ್ಜೆ :
ನಿತಿನ್ ತಮ್ಮ ಬಾಲ್ಯದಲ್ಲೇ ವಾದ್ಯ ವಾದನದ ಕುರಿತು ಆಸಕ್ತಿ ತೋರಿದವರು. ತಂದೆಯೂ ಈ ಕಲೆಯನ್ನು ಬಲ್ಲವರಾದ್ದರಿಂದ, ಕಲಿಕೆ ಕಷ್ಟವಾಗಲಿಲ್ಲ, ಬದಲಿಗೆ ತಂದೆಯೇ ಮೊದಲ ಗುರುವಾದರು. ತಂದೆ ರಾಘವ ಶೇರಿಗಾರ್ ಮತ್ತು ತಾಯಿ ಮೋಹಿನಿ ಶೇರಿಗಾರ್ ನಿತಿನ್ ಕಲಿಕೆಗೆ ಪ್ರೋತ್ಸಾಹಕರಾಗಿ ನಿಂತರು.
ವಾದನಕಲೆಯ ಬೆಳವಣಿಗೆ :
ತನ್ನ ವಾದ್ಯ ಕಲಿಕೆಯ ಮುಂದಿನ ದಿನಗಳ ಬಗ್ಗೆ ಹೇಳುವ ನಿತಿನ್, “ಏಳನೇ ತರಗತಿಯಲ್ಲಿ ಇರುವಾಗ ಕಾಡುಬೆಟ್ಟು ರಾಘವೇಂದ್ರ ರಾವ್ ಅವರಿಂದ ಸಾಕ್ಸೊಫೋನ್ ಕಲಿಕೆಯನ್ನು ಆರಂಭಿಸಿದೆ. ನಂತರ ನಾಗಸ್ವರದ ಹೆಚ್ಚಿನ ಪಾಠವನ್ನು ಗುರುಗಳಾದ ಪೆರ್ಣಂಕಿಲ ರಾಘು ಶೇರಿಗಾರ್ ಅವರಿಂದ ಕಲಿತೆ. ನಂತರದ ದಿನಗಳಲ್ಲಿ ಕಾರ್ಯಕ್ರಮಕ್ಕೆ ಜೊತೆಯಾಗುತ್ತಾ ಸ್ವಪ್ರಯೋಗಗಳಿಂದ ಹೊಸತನ್ನು ಕಲಿತು, ಅಳವಡಿಸಿಕೊಳ್ಳುತ್ತಾ ಬೆಳೆದೆ” ಎನ್ನುತ್ತಾರೆ.
“ಅಲೆವೂರು ಗಣೇಶೋತ್ಸವ ಸಮಿತಿ, ಬುಡ್ನಾರು ಗರಡಿ, ಮಾರ್ಪಳ್ಳಿ ಗರಡಿ, ಕಿದಿಯೂರು ಗರಡಿ, ಸಗ್ರಿ ಮಲೆಜುಮಾದಿ ದೈವಸಾನ, ಬೀಡಿನಗುಡ್ಡೆ ಪಿಲಿಚಾಮುಂಡಿ ಸ್ಥಾನ, ಮಂಚಿ ಪಿಲಿಚಾಮುಂಡಿ ಸ್ಥಾನ, ಮಂಚಿ ಮೂಲಸ್ಥಾನ, ಅಂಬಾಡಿ ದೈವಸ್ಥಾನ, ಅಡ್ಕದಕಟ್ಟೆ ದೈವಸ್ಥಾನ ಹೀಗೆ ಇಲ್ಲಿ ನಡೆಯುವ ವರ್ಷದ ಧಾರ್ಮಿಕ ಆಚರಣೆಗಳಲ್ಲಿ ನಾಗಸ್ವರ ನುಡಿಸುತ್ತಾ ಬಂದಿದ್ದೇನೆ.ಜೊತೆಗೆ ಮೂಲ್ಕಿ ನಡಿಬೆಟ್ಟು ದೇವಸ್ಥಾನ, ಉಡುಪಿ ವಾಸುಕಿ ಅನಂತಪದ್ಮನಾಭ ದೇವಸ್ಥಾನ, ಕೆಮ್ತೂರು ವಿಷ್ಣುಮೂರ್ತಿ ದೇವಸ್ಥಾನ, ಉಚ್ಚಿಲ ಮಹಾಲಕ್ಷ್ಮಿ ದೇವಸ್ತಾನಗಳಲ್ಲಿ ವಾದ್ಯ ನುಡಿಸಿದ್ದೇನೆ.”
ಊರಿನಲ್ಲಿ ಮಾತ್ರವಲ್ಲದೆ ಮುಂಬಯಿ, ಹುಬ್ಬಳ್ಳಿ, ಬಳ್ಳಾರಿ, ಬೆಂಗಳೂರು ಮುಂತಾದ ಪರ ಊರುಗಳಲ್ಲೂ ಸ್ಯಾಕ್ಸೊಫೋನ್ ಮತ್ತು ನಾಗಸ್ವರ ವಾದನ ಮಾಡಿದ್ದೇನೆ” ಎನ್ನುತ್ತಾರೆ.
ಹಾಡುಗಳನ್ನು ನುಡಿಸುವ ನಾಗಸ್ವರ, ಸ್ಯಾಕ್ಸೊಫೋನ್ ವಿಶೇಷ :
ನಿತಿನ್, ತನ್ನ ನಾಗಸ್ವರ ಮತ್ತು ಸ್ಯಾಕ್ಸೊಫೋನ್ ನಲ್ಲಿ ಹತ್ತು ಹಲವು ಸಿನಿಮಾ ಗೀತೆ, ಭಾವಗೀತೆ ಮತ್ತು ಭಕ್ತಿ ಗೀತೆಗಳನ್ನು ನುಡಿಸಬಲ್ಲರು.
“ನಿನ್ನ ದನಿಗಾಗಿ ಎನ್ನುವ ಹಾಡನ್ನು ನಾಗಸ್ವರದಿಂದ ನುಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಾಗ ಬಹುಬೇಗ ಜನಪ್ರಿಯವಾಗಿತ್ತು. ಮುನಿಸು ತರವೆ ಭಾವಗೀತೆ ಎಲ್ಲರಿಗೂ ಇಷ್ಟವಾಗಿತ್ತು. ಯೂಟ್ಯೂಬ್ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ಸಿಕ್ಕಿದೆ. ಸಿನಿಮಾ ಹಾಡುಗಳಿಗೂ ಪ್ರೇಕ್ಷಕರಿದ್ದಾರೆ” ಎಂದವರು ಹೇಳುತ್ತಾರೆ.
ಪ್ರಸ್ತುತ ಬಡಗಬೆಟ್ಟು ಕ್ರೆಡಿಟ್ ಕೊ ಆಪರೇಟಿವ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದು, ವಾದ್ಯಕಲೆಯಲ್ಲಿ ಬೆಳೆಯುತ್ತ, ಹತ್ತು ಹಲವು ಕಡೆ ಗೌರವ ಪುರಸ್ಕಾರಗಳನ್ನು ಪಡೆದಿದ್ದಾರೆ.
ನಿತಿನ್ ಉತ್ತಮ ವಾದ್ಯ ವಾದಕರಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯುವ ಆಶಯ ಹೊಂದಿದ್ದಾರೆ. ಅವರಿಗೆ ಶುಭಕೋರಲು ಸಂಪರ್ಕ ಸಂಖ್ಯೆ : 9686433153