ಮಡಿಕೇರಿ: ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ್ ಆಚಾರ್ಯ ಮಕ್ಕಳಿಬ್ಬರಿಗೆ ಇದೀಗ ಪರಿಹಾರದ ಹಣ ಪಡೆಯಲು ಮತಾಂತರ ಅಡ್ಡಿಯಾಗಿದ್ದು, ಪುತ್ರಿಯರಿಬ್ಬರೂ ಅನ್ಯಧರ್ಮಕ್ಕೆ ಮತಾಂತರ ಆಗಿರುವುದೇ ಈ ಸಮಸ್ಯೆ ಕಾರಣ.
ಆಗಸ್ಟ್ 5 ರಂದು ಬ್ರಹ್ಮಗಿರಿ ಬೆಟ್ಟದ ಸಾಲಿನ ಗಜಗಿರಿ ಬೆಟ್ಟ ಕುಸಿದು ನಾರಾಯಣ ಆಚಾರ್ಯ, ಶಾಂತ ಆಚಾರ್ಯ, ಆನಂದ ತೀರ್ಥ ಸ್ವಾಮಿಜಿ, ರವಿ ಕಿರಣ್ ಮತ್ತು ಶ್ರೀನಿವಾಸ್ ಅವರು ಭೂ ಸಮಾಧಿಯಾಗಿದ್ದರು. ಈ ಪೈಕಿ ಶಾಂತ ಆಚಾರ್ಯ ಮತ್ತು ಶ್ರೀನಿವಾಸ್ ಭಟ್ ಅವರ ಮೃತ ದೇಹಗಳು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಆ. 15 ರಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಇಬ್ಬರು ಪುತ್ರಿಯರಿಗೆ ತಲಾ 2.50 ಲಕ್ಷ ರೂ ನಂತೆ ಪರಿಹಾರ ಹಣ ನೀಡಿದ್ದರು.
ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶದಲ್ಲಿ ನೆಲೆಸಿರುವ ನಾರಾಯಣ್ ಆಚಾರ್ಯ ಮಕ್ಕಳು ವಿದೇಶದಿಂದ ಮರಳಿ ಬಂದ ಮೇಲೆ ತಮ್ಮ ಪಾಲಕರು ನಾಪತ್ತೆಯಾಗಿರುವ ಬಗ್ಗೆ ಭಾಗಮಂಡಲ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರು ನೀಡುವ ಸಂದರ್ಭ ಪುತ್ರಿಯರು ಶಾರದ ಆಚಾರ್ಯ ಮತ್ತು ನಮಿತಾ ಆಚಾರ್ಯ ಎಂದು ತಮ್ಮ ಹೆಸರು ಉಲ್ಲೇಖ ಮಾಡಿದ್ದರು. ಅದರಂತೆ ಸರ್ಕಾರ ಪರಿಹಾರದ ಹಣ ವಿತರಿಸಿತ್ತು.
ಪರಿಹಾರದ ಚೆಕ್ ವಾಪಸ್:
ಇದೀಗ ಪರಿಹಾರದ ಚೆಕ್ ಅನ್ನು ಭಾಗಮಂಡಲದ ನಾಡ ಕಚೇರಿಗೆ ನಾರಾಯಣ್ ಆಚಾರ್ಯರ ಮಕ್ಕಳು ಚೆಕ್ ವಾಪಸ್ಸು ಮಾಡಿದ್ದಾರೆ. ನಮ್ಮ ಇಬ್ಬರ ಹೆಸರು ಬದಲು ಮಾಡಬೇಕು. ಶೆನೋನ್ ಫರ್ನಾಂಡೀಸ್ (ಶಾರದಾ ಆಚಾರ್ಯ), ನಮಿತಾ ನಜೇರತ್ ಎಂಬ ಹೆಸರಿಗೆ ಚೆಕ್ ನೀಡಬೇಕು ಎಂದು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ತಹಶೀಲ್ದಾರ್ ಮಹೇಶ್ ಚೆಕ್ ತಡೆಹಿಡಿದಿದ್ದಾರೆ. ಹೆಸರು ಬದಲಾವಣೆ ಮಾಡಿಕೊಂಡು ಇರುವುದಕ್ಕೆ ಸೂಕ್ತವಾದ ದಾಖಲೆಗಳನ್ನು ನೀಡಿ ಪರಿಹಾರದ ಹಣ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.