ಕಾಪು: ಮಕ್ಕಳಿಗೆ ಕುಟುಂಬ ವ್ಯವಸ್ಥೆ ಪರಿಚಯಿಸುವ ವಿಶಿಷ್ಟ ಕಾರ್ಯಕ್ರಮ

ಉಡುಪಿ: ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ಸಂಬಂಧಗಳು ಮರೆಯಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ  ಪುಟಾಣಿ ಮಕ್ಕಳಿಗೆ ಕುಟುಂಬ ವ್ಯವಸ್ಥೆಯನ್ನು ಪರಿಚಯಿಸುವ ವಿಶಿಷ್ಟ ಕಾರ್ಯಕ್ರಮವನ್ನು ಮಂಗಳವಾರ ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ವತಿಯಿಂದ ಹಮ್ಮಿಕೊಳ್ಳಲಾಯಿತು. ಯುಕೆಜಿ ವಿದ್ಯಾರ್ಥಿ ಮುಹಮ್ಮದ್ ನೆಹಾನ್ ಅವರ ಕಾಪು ಪೊಲಿಪುನಲ್ಲಿರುವ ಮನೆಗೆ ಅದೇ ತರಗತಿಯ ಸುಮಾರು 60 ಪುಟಾಣಿ ಮಕ್ಕಳನ್ನು ಶಿಕ್ಷಕಿಯರು ಕರೆದೊಯ್ದು ಕುಟುಂಬ ವ್ಯವಸ್ಥೆಯ ಕುರಿತು ಪಾಠ ಮಾಡಿದರು. ವಿದ್ಯಾರ್ಥಿಯ ತಂದೆ ತಾಯಿ ಹಾಗೂ ಅಜ್ಜ ಅಜ್ಜಿಯಂದಿರ ಪರಿಚಯದ ಮೂಲಕ ಸಂಬಂಧಗಳ ಕುರಿತು ಮಕ್ಕಳಿಗೆ ತಿಳುವಳಿಕೆ ನೀಡಲಾಯಿತು.   ಅಜ್ಜ ಅಜ್ಜಂದಿರ ಮಹತ್ವಗಳ ಬಗ್ಗೆ ತಿಳಿ ಹೇಳಲಾಯಿತು. ಬಳಿಕ ವಿದ್ಯಾರ್ಥಿಗಳು ಹೆತ್ತವರ ಪ್ರಾಮುಖ್ಯತೆಗಳನ್ನು ಬಿಂಬಿಸುವ ಹಾಡನ್ನು ಹಾಡಿದರು.  ಕೆಲ ವಿದ್ಯಾರ್ಥಿಗಳು ನೀತಿ ಕಥೆಗಳನ್ನು ಹೇಳಿದರು. ಹೀಗೆ ಸಂಬಂಧಗಳ ಪ್ರಾಮುಖ್ಯತೆ ತಿಳಿಸುವ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಓಫಿಲಿಯಾ ಕುಟಿನ್ಹಾ,  ಶಿಕ್ಷಕಿಯರಾದ ಆಶಾ ಅಂಚನ್, ವನಿತಾ ಕೋಟ್ಯಾನ್  ಉಪಸ್ಥಿತರಿದರು.