ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂದು ರಾತ್ರಿ ಭಾರತ- ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಕ್ರಿಕೆಟ್ ಜಗತ್ತಿನ ಈ ಬದ್ಧ ಎದುರಾಗಳಿಗಳ ಹಣಾಹಣಿಯನ್ನು ಕಣ್ಮನ ತುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯ ಅಜೇಯ ಇತಿಹಾಸದ ಪರಂಪರೆಯನ್ನು ಉಳಿಸಿಕೊಳ್ಳುವ ಸವಾಲು ವಿರಾಟ್ ಕೊಹ್ಲಿ ಬಳಗದಾಗಿದ್ದರೆ, ಭಾರತದ ಅಜೇಯ ಓಟಕ್ಕೆ ತಡೆಯೊಡ್ಡಿ ಹೊಸ ಇತಿಹಾಸ ನಿರ್ಮಿಸುವ ಕನಸು ಬಾಬರ್ ಆಜಂ ಬಳಗದ್ದು.
ಉಭಯ ದೇಶಗಳ ನಡುವಣ ಹದಗೆಟ್ಟಿರುವ ರಾಜಕೀಯ ಸಂಬಂಧಗಳಿಂದಾಗಿ ಕ್ರೀಡಾ ತಂಡಗಳು ಮುಖಾಮುಖಿಯಾಗುವುದು ಅಪರೂಪವಾಗಿದೆ. ಎರಡೂ ತಂಡಗಳ ನಡುವೆ ಹಲವು ವರ್ಷಗಳಿಂದ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಆದ್ದರಿಂದ ವಿಶ್ವಕಪ್ ವೇದಿಕೆಗಳಲ್ಲಿ ಮಾತ್ರ ಈ ತಂಡಗಳು ಎದುರುಬದುರಾಗುವುದರಿಂದ ಅಭಿಮಾನಿಗಳ ವಲಯದಲ್ಲಿ ರೋಚಕತೆಯ ಕಾವು ಮತ್ತಷ್ಟು ಹೆಚ್ಚಾಗುತ್ತಿದೆ.
2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಾಕ್ ಎದುರು ನಿರಾಶೆ ಅನುಭವಿಸಿದ್ದನ್ನು ವಿರಾಟ್, ರೋಹಿತ್ ಮತ್ತು ಬೂಮ್ರಾ ಮರೆತಿಲ್ಲ. ಈ ಬಾರಿ ಎರಡೂ ತಂಡಗಳನ್ನು ಹೋಲಿಕೆ ಮಾಡಿದರೆ ಬಹಳಷ್ಟು ವಿಷಯಗಳಲ್ಲಿ ಭಾರತವೇ ಬಲಾಢ್ಯ.
ತಂಡಗಳು:
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜ, ಆರ್. ಅಶ್ವಿನ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ವರುಣ್ ಚಕ್ರವರ್ತಿ, ರಾಹುಲ್ ಚಾಹರ್.
ಪಾಕಿಸ್ತಾನ: ಬಾಬರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಫಕರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯಬ್ ಮಲಿಕ್, ಅಲಿಫ್ ಅಲಿ, ಇಮಾದ್ ವಾಸೀಂ, ಶಾದಾಬ್ ಖಾನ್, ಹ್ಯಾರಿಸ್ ರವೂಫ್, ಹಸನ್ ಅಲಿ, ಶಾಹೀನ್ ಶಾ ಆಫ್ರಿದಿ, ಹೈದರ್ ಅಲಿ.
ಪಂದ್ಯ ಆರಂಭ: ರಾತ್ರಿ 7.30