ಅವನ ಜನ್ಮಭೂಮಿಯಲ್ಲೇ ಅವನಿಗೊಂದು ಮಂದಿರ!: ಅಯೋಧ್ಯೆ-ರಾಮನ ಕುರಿತು ಟಿ ದೇವಿದಾಸ್ ಬರೆದ ಸ್ವಾರಸ್ಯಕರ ಬರಹ

 

           ಟಿ. ದೇವಿದಾಸ್

ಸಮಸ್ತ ಭಾರತೀಯರ ಪೂರ್ವಪುಣ್ಯಕೃತ ವಿಶೇಷ ಸೌಭಾಗ್ಯವೆಂದರೆ ಇದೇ ಇರಬೇಕು! ಸಮಸ್ತ, ಸಮಗ್ರ ಭಾರತದ ಮನೋ ಆರಾಧ್ಯಮೂರ್ತಿ ಪ್ರಭು ಶ್ರೀರಾಮಚಂದ್ರನಿಗೆ ಅವನದೇ ಜನ್ಮಭೂಮಿಯಲ್ಲಿ ವಿಶ್ವವಿಖ್ಯಾತ ಭವ್ಯ ದಿವ್ಯ ಮಂದಿರ ನಿರ್ಮಾಣಕ್ಕೆ ಇಂದು ಶಿಲಾನ್ಯಾಸ ಆಗುತ್ತಿರುವುದು ಮೈಮನಗಳಲ್ಲಿ ಪರಮಾನಂದದ ಅನುಭೂತಿಯನ್ನು ನೀಡುತ್ತಿದೆ. 500 ವರ್ಷಗಳ ಹಿಂದೆ ರಾಮ ಮಂದಿರವನ್ನು ಕೆಡವಿದರು. ಆದರೆ ಯಾರಿಗೂ ರಾಮ ಭಕ್ತಿಯನ್ನು ಕೆಡವಲು ಸಾಧ್ಯವಾಗಲೇ ಇಲ್ಲ. ಅದಕ್ಕೆ ಸಾವಿಲ್ಲ. ಯಾಕೆಂದರೆ ಅದು ಮನುಜಾ ಕೃಪಾಸಿತ ತಾರಕಮಂತ್ರ. ರಾಮಮಂದಿರದ ಕನಸು ಮತ್ತು ಕಲ್ಪನೆ ಗುಪ್ತಗಾಮಿನಿಯಾಗೇ ಭಾರತೀಯರಲ್ಲಿ ಹರಿಯುತ್ತಿತ್ತು. ದೇಶದ ಸರ್ವೋಚ್ಛ ನ್ಯಾಯಾಲಯ ಕಳೆದ ನವೆಂಬರ್ ಒಂಬತ್ತರಂದು ಅಯೋಧ್ಯೆಯಲ್ಲೇ ರಾಮಮಂದಿರಕ್ಕೆ ಅಸ್ತು ಎಂದು ವಿವಾದರಹಿತ ತೀರ್ಪನ್ನು ನೀಡಿತು. ಅಲ್ಲಿಗೆ ಎಲ್ಲ ಬಗೆಯ ಅಡ್ಡಿಆತಂಕಗಳು, ಅಪಸವ್ಯಗಳು ಮರೆಯಾಗಿ ಕಾಲಕೂಡಿ ಬಂದೇ ಬಿಟ್ಟಿತು ಇಂಥ ವೈಭವೋಪೇತ ಮಂದಿರ ನಿರ್ಮಾಣಕ್ಕೆ! ಫಲಸ್ವರೂಪವಾಗಿ ಇಂದು ಬೆಳಗ್ಗೆ ೧೧:೩೦ ಯಿಂದ ೧೨:೩೦ ವರೆವರೆಗೆ ನಡೆಯುವ ಭೂಮಿಪೂಜೆಯ ಮೂಲಕ ಮಂದಿರ ನಿರ್ಮಾಣಕ್ಕೆ ಬೃಹತ್ ಸಂಕಲ್ಪ ನೆರವೇರುತ್ತದೆ.

♦ ಕಮ್ಯುನಿಷ್ಟ ಬುದ್ಧಿಯ ವಿಕ್ಷಿಪ್ತ ವಿ-ಘಟನೆಯ ಕೆಟ್ಟ ನೆನಪು:

ಆರ್ಯರು ಹೊರಗಿನಿಂದ ಬಂದವರು, ಅನಾಗರಿಕರು, ಆಕ್ರಮಣಶೀಲ ಪ್ರವೃತ್ತಿಯವರು, ಸಂಸ್ಕೃತವನ್ನು ಮಾತಾಡುತ್ತಿದ್ದವರು, ಭಾರತ ನೆಲಕ್ಕೆ ಬಂದು ತಮಿಳು ಮಾತಾಡುತ್ತಿದ್ದ ದ್ರಾವಿಡರನ್ನು ನಿರ್ನಾಮ ಮಾಡಿದ ಚರಿತ್ರೆ ಹರಪ್ಪಾ-ಮೊಹೆಂಜೋದಾರೋ ನಗರಗಳ ನಾಶದಡಿಯಲ್ಲಿವೆ. ಸಿಂಧೂ ಕೊಳ್ಳದಲ್ಲಿ ಕಾಣಿಸುವುದು ಈ ಭಗ್ನಾವಶೇಷ ಸಂಸ್ಕೃತಿಯ ಭಾಷೆ, ಚಿಹ್ನೆ, ಸಾಕ್ಷ್ಯಾಧಾರಗಳು- ಎಂಬ ದುರುದ್ದೇಶಪೂರಿತ ಎಡಚಿಂತನೆಯನ್ನು ನೂರು ವರ್ಷಗಳ ಹಿಂದೆಯೇ ಬಿತ್ತಿ ದೇಶವಾಸಿಗಳ ತಲೆಯನ್ನು ಕೆಡಿಸಲಾಯಿತು ಎಡಪಂಥೀಯ  ಚಿಂತಕರಿಂದ.

ಈ ಎಡ ಚಿಂತನೆ ಬ್ರಿಟಿಷರು ನಡೆಸಿದ ಕುತಂತ್ರ, ಅಪಪ್ರಚಾರ ಎಂಬುದನ್ನು 2008 ರಲ್ಲಿ ಬಿಬಿಸಿಯಲ್ಲಿ ತಪ್ಪೊಪ್ಪಿಗೆ ರೀತಿಯಲ್ಲಿ ಪ್ರಕಟಣೆ ಮಾಡಿದ್ದೂ ಆಗಿದೆ. ಆದರೆ ಹೀಗೆ ಬಿಂಬಿಸಿದುದರ ಫಲವಾಗಿ ಆದ ದುರಂತಗಳೇನು? ಐರೋಪ್ಯರು ಆರ್ಯಮೂಲದವರೆಂದು ನಂಬಿಸಿ ಹಿಟ್ಲರನ ತಲೆಕೆಡಿಸಿ, ಯಹೂದ್ಯ ಸಂತಾನದ ಮಾರಣಹೋಮಕ್ಕೆ ನಾಂದಿಹಾಡಿಸಿದ್ದು. ಅಮಾಯಕರು ಲೆಕ್ಕವಿಲ್ಲದಷ್ಟು ಸತ್ತರು. ನಿಜವಾಗಿ ಇಡೀ ಯುರೋಪು ತತ್ತರಿಸಿಯೇ ಹೋಯಿತು! ಭಾರತದಲ್ಲಿ ದ್ರವಿಡ ಚಳವಳಿಯ ಹಾದಿಯೇ ಹಳ್ಳ ಹಿಡಿಯಿತು.

ಅದರ ಮುಂದಾಳಾದ ರಾಮಸ್ವಾಮಿ ನಾಯ್ಕರು(ಕರ್ನಾಟಕದ ಚನ್ನಪಟ್ಟಣ ಮೂಲದವರು) ಪ್ರತ್ಯೇಕ ದ್ರವಿಡ ಸ್ಥಾನ ಬೇಡಿಕೆಯಿಟ್ಟು, ಬ್ರಾಹ್ಮಣರನ್ನು ಸಂಸ್ಕೃತವನ್ನು ಉತ್ತರ ಭಾರತವನ್ನು ಉಪನಿಷತ್ತು, ವೇದ, ರಾಮಾಯಣ, ಮಹಾಭಾರತ, ಗೀತೆ, ದೇವಾಲಯ ಸಂಸ್ಕೃತಿ, ಅಖಂಡ ಭಾರತೀಯ ಸಂಸ್ಕೃತಿಯೇ ದ್ವೇಷಕ್ಕೀಡಾಗುವಂತೆ ಮಾಡಿ, ಸಮಸ್ತ ನಿರ್ಮೂಲನೆಗೆ ಕರೆಯಿತ್ತದ್ದು! ಗಣೇಶ ವಿಗ್ರಹಗಳನ್ನು ಒಡೆಸಿದ್ದು, ಶಂಕರಾಚಾರ್ಯರ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿಸಿದ್ದು, ರಾಮಾಯಣವನ್ನು ನಿಂದಿಸುತ್ತ, ಅವಹೇಳನಗೊಳಿಸಿ ಕೀಮಾಯಣಂ ನಾಟಕವಾಡಿಸಿದ್ದು, ಬ್ರಾಹ್ಮಣರ ಜುಟ್ಟು, ಜನಿವಾರ ಕತ್ತರಿಸುವ, ನಾಮ ನೆಕ್ಕುವ, ಚಪ್ಪಲಿಗಳನ್ನು ಧರಿಸಿಯೇ ದೇವಸ್ಥಾನದೊಳಗೆ ಹೋಗುವ ಸಂಸ್ಕೃತಿಹೀನ, ಅನಾಗರಿಕ ರೂಪದ ಚಳವಳಿಗಳನ್ನು ಉದ್ದೀಪಿಸಿ, ತಮಿಳರನ್ನು ತಮ್ಮ ಮೂಲಸಂಸ್ಕೃತಿಯ ವಿರುದ್ಧ ಎತ್ತಿಕಟ್ಟಿದರು! ಈ ದ್ವೇಷ, ಉರಿಯ ಶಿಶುವೇ ಕರುಣಾನಿಧಿ.

ಮೂಲತಃ ಬ್ರಿಟಿಷರು ಕಟ್ಟಿದ Justice Party ಯೇ ಈ ದ್ರವಿಡ ಕಳಗಂ (DK), ಇದರ ಮೂಲಪಿತಾಮಹ ನಾಯ್ಕರ್. ಆರ್ಯವಾದದಿಂದ ಇಡೀ ಯುರೋಪೇ ನಾಶವಾಯಿತು; ದ್ರವಿಡ ವಾದದಿಂದ ಭಾರತ ಅಲ್ಲೋಲ-ಕಲ್ಲೋಲವಾಯಿತು. ಈ ಕರುಣಾನಿಧಿ ಒಮ್ಮೆ ಯುರೋಪಿನಲ್ಲಿ ರಾಮನನ್ನು ಅವಹೇಳನ ಮಾಡುತ್ತಾ, “ಶ್ರೀರಾಮ ಯಾವುದೋ ಕಾಲ್ಪನಿಕ ವ್ಯಕ್ತಿ. ಅಲ್ಲವಾದರೆ ಆರ್ಯಮುಖಂಡ. ದ್ರಾವಿಡರನ್ನು ಹಾಳುಮಾಡಿದವನು. ಅವನು ಈ ಸೇತುವೆ ಕಟ್ಟಲು ಯಾವ ವಿಶ್ವವಿದ್ಯಾಲಯದಿಂದ ಎಂಜನಿಯರಿಂಗ್ ಡಿಗ್ರಿ ಪಡೆದಿದ್ದ? ಎಂದಿದ್ದರು. ಅದ್ಯಾವ ಎಂಗಲಿನಲ್ಲಿ ಇವರ ತಂದೆ ಇವರಿಗೆ ಕರುಣಾನಿಧಿ ಹೆಸರನ್ನಿಟ್ಟರೋ? ಶ್ರೀರಾಮಚಂದ್ರನನ್ನು ಕರುಣಾನಿಧಿಯೆಂದು ಸಂಬೋಧಿಸಲಾಗುತ್ತದೆ. ದೇಶದ್ರೋಹವೂ ಒಂದು ನಿಷ್ಠೆಯಾಗಿ ಕಾಣುವುದು ಭಾರತದಲ್ಲಿ ಮಾತ್ರ! ನಾವಿರುವುದೇ ಒಡೆದು ಸಾಯಲಿಕ್ಕೆ ಎಂಬ ವಿತಂಡ, ಕುತರ್ಕ, ಮತಿಗೆಟ್ಟ, ಕುಹಕ ಮನಸ್ಥಿತಿಯಿಂದ ಹೊರಬಂದು ಒಂದುಗೂಡುವುದು ಸಾಧ್ಯವಿಲ್ಲವೇನೋ! ಎಂಥದ್ದೇ ಅಡ್ದಿಆತಂಕಗಳಿದ್ದರೂ ಎಲ್ಲೋ ಒಂದೆಡೆ ದೇಶಕಟ್ಟುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿರುವುದರಿಂದ ಭಾರತಪ್ರೇಮ ಸಾಯದೆ ಅಮರಪ್ರೇಮದೊರತೆ ಬತ್ತುಹೋಗಕೊಡದೆ ಜೀವಂತವಾಗಿದೆ. ಇದೇ ಭಾರತದ ವೈಶಿಷ್ಟ್ಯ, ಅಂತಃಸ್ಸತ್ವ! ಒಂದೊಂದು ಕಾಲಕ್ಕೆ ಒಬ್ಬೊಬ್ಬ ಮಹಾಪುರುಷ ಹುಟ್ಟಿಬಂದು ದೇಶವನ್ನು ಸಂಪದಗೊಳಿಸಿದ ಸಾಲಿನಲ್ಲಿ ಈಗ ಮೋದಿಯ ಸರದಿಯೇನೋ!

♦ ರಾಮನಿಲ್ಲದೆ ಭಾರತದ ಕಥೆಯಿಲ್ಲ

ಅಯೋಧ್ಯಾ ರಘುವಂಶ ವಲ್ಲಭ ಮರ್ಯಾದಾ ಪುರುಷೋತ್ತಮನಿಗೆ ಅವನ ಜನ್ಮಭೂಮಿಯಲ್ಲೇ ಜಗತ್ಪ್ರಸಿದ್ಧ ಪ್ರತಿಮೆಯನ್ನು ನಿರ್ಮಿಸಿ ಅವನಿಗೊಂದು ಬೃಹತ್ ಮಂದಿರವನ್ನು ಕಟ್ಟುವ ಸತ್ಸಂಕಲ್ಪ ಶತಮಾನಗಳಷ್ಟು ಹಿಂದಿನ ಅಖಂಡ ಭಾರತೀಯರ ಮಹತ್ ವಾಂಛೆಯಾಗಿತ್ತು. ರಾಮರಥಾ ಯಾತ್ರೆ ಪ್ರತಿಯೊಬ್ಬ ಭಾರತೀಯನ ನಾಲಗೆಯಲ್ಲೂ ರಾಮನಾಮವನ್ನು ಉಲಿಯುವಂತೆ ಮಾಡಿತು. ಭಾರತದ ಯಾವುದೇ ಭಾಗದಲ್ಲಿಯೂ ರಾಮ ಎಂಬ ಹೆಸರನ್ನು ಇಟ್ಟುಕೊಂಡವರು ಇಲ್ಲ ಅಂತಿರಲು ಸಾಧ್ಯವೇ ಇಲ್ಲ. ರಾಮನಾಮದ ಮಹಿಮೆಯಂತೂ ಅಪಾರ. ಯಾವ ನೆಲದಲ್ಲಿ ರಾಮಮಂದಿರವನ್ನು ದುಷ್ಟರು ಕೆಡವಿದರೋ ಅದೇ ನೆಲದ ಗರ್ಭಗೃಹದಲ್ಲಿ ಶ್ರೀರಾಮ ಮಂದಿರಕ್ಕಾಗಿ ನಾಳೆ ಐತಿಹಾಸಿಕ ಶಿಲಾನ್ಯಾಸ ಪುಣ್ಯಕಾರ್ಯ ನೆರವೇರಲಿದೆ. ದೇಶದ ಪ್ರಧಾನಿಯೇ ಪ್ರತ್ಯಕ್ಷವಾಗಿ ಅದನ್ನು ಮಾಡಲಿದ್ದಾರೆ.‌

ಭಕ್ತಿ-ಭಾವ ತನ್ಮಯತೆಯ ಅಸಂಖ್ಯ ಭಾರತೀಯರ ಹೃದಯ ಸಾಮ್ರಾಜ್ಯದ ಸಾಮ್ರಾಟನಿಗೊಂದು ವಿಶ್ವಮಾನ್ಯ ಭವ್ಯಮಂದಿರ ಕೇವಲ ಮೂರು ವರ್ಷದೊಳಗೆ ತಲೆಯೆತ್ತು ನಿಲ್ಲುತ್ತದೆ ಎಂಬುದೇ ಅತ್ಯಂತ ರೋಚಕವೆನಿಸುತ್ತದೆ. ರಾಮನಿಲ್ಲದೆ ಭಾರತದ ಕಥೆಯಿಲ್ಲ; ರಾಮಕಥೆ ಭಾರತದಷ್ಟೇ ಅಲ್ಲ; ಆದರೆ ಭಾರತ ಬಿಟ್ಟು ರಾಮ ಎಲ್ಲೂ ಇರಲಾರ. ಯಾಕೆಂದರೆ ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರಿಯಸೀ ಎಂದವನಿಗೆ ಭಾರತ ಬಿಟ್ಟಿರಲು ಹೇಗೆ ಸಾಧ್ಯವಾದೀತು ಎಂಬುದು ಕೊನೆಗೂ ಸಾಬೀತಾಗಿಯೇ ಬಿಟ್ಟಿತು.

ಈಗ ಎಲ್ಲೆಲ್ಲೂ ರಾಮ ರಾಮ ರಾಮ ಎಂಬ ಬೀಜಮಂತ್ರದ ಜಪ. ರಾಮೋ ರಾಮೋ ರಾಮ ಇತಿ ಪ್ರಜಾನಾಂ ಅಭವನ್ ಕಥಾಃ| ರಾಮಭೂತಂ ಜಗದಭೂತ್ ರಾಮೇ ರಾಜ್ಯಂ ಪ್ರಶಾಸತಿ|| ಎಲ್ಲೆಲ್ಲೂ ಈ ದೇಶದಲ್ಲಿ ರಾಮ ಆದರ್ಶನಾಗಲಿ, ಆಕರ್ಷಣೆಯಾಗಲಿ, ಮಾದರಿಯಾಗಲಿ. ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಂ- ಎಂದು ಮೋಹಕಾರ್ಥದ ಮಾತನ್ನಾಡಿದ ರಾಮ ಈಗಲೂ ಭಾರತೀಯರಿಗೆ ದಶರಥನ ಮಗನಾಗಿಯಷ್ಟೇ ಅಲ್ಲದೆ ದೇವನಾಗಿ ಭಾರತವನ್ನು ರಾಮರಾಜ್ಯವನ್ನಾಗಿಸಲಿ ಎಂದು ಅವನಲ್ಲೇ ಪ್ರಾರ್ಥಿಸೋಣ.

ಈ ಐತಿಹಾಸಿಕ ಸಂಭ್ರಮದ ವಿಶೇಷತೆಗಳು:

 ೨೭೦ ಅಡಿ ಉದ್ದ, ೧೪೫ ಅಡಿ ಅಗಲ, ೧೪೧ ಅಡಿ ಎತ್ತರದ ೨೫ ಅಡಿ  ಎತ್ತರದ ಮೊದಲ ಫೌಂಡೇಶನ್ ಮೇಲೆ ಆರಡಿ ಎತ್ತರದ ಗರ್ಭಗುಡಿಯ ಎದುರಿನ ವೇದಿಕೆ, ಅದರ ಮೇಲೆ ೧೬ ಅಡಿ ಎತರದಲ್ಲಿ ೧೦೬ ಪಿಲ್ಲರುಗಳನ್ನು ಎರಡು ಸ್ತರಗಳಲ್ಲಿ ಹೊಂದಿರುವ ಈ ಮಂದಿರಕ್ಕೆ ೫ ಮಹಾದ್ವಾರಗಳಿದ್ದು, ಒಂದು ಪ್ರಧಾನ ದ್ವಾರವಿರುತ್ತದೆ. ಅಕ್ಷರಧಾಮ, ಸೋಮನಾಥ ಮಂದಿರ ವಾಸ್ತುಶಿಲ್ಪವೂ ಸೇರಿ ಸುಮಾರು ೨೦೦ ದೇವಳಗಳ ವಿನ್ಯಾಸ ರಚಿಸಿರುವ ಚಂದ್ರಕಾಂತ ಸೋಮಪುರ ಎಂಬ ಮುಖ್ಯ ವಾಸ್ತುಶಿಲ್ಪಿ ೧೯೮೭ರಲ್ಲಿ ಅಶೋಕ್ ಸಿಂಘಾಲ್ ಮನವಿಯ ಮೇಲೆ ಈ ರಾಮಮಂದಿರದ ವಿನ್ಯಾಸವನ್ನು ರೂಪಿಸಿದ್ದೂ ಅದನ್ನೇ ಸಂಪೂರ್ಣವಾಗಿ ಉಳಿಸಿಕೊಳ್ಳುವಂತೆ ಮನವಿಯನ್ನೂ ಮಾಡಿಕೊಂಡ ಇವರು ಮಂದಿರಕ್ಕೆ ಪಹಡಪುರದ ೧೫೦೦ ವರ್ಷಗಳ ಆಯುಸ್ಸು ಹೊಂದಿರುವ ಸ್ಯಾಂಡ್ ಸ್ಟೋನ್ ಬಳಕೆಯಾಗಬೇಕು. ಕಳೆದ ೩೩ ವರ್ಷಗಳಲ್ಲಿ ೭೦% ಮಂದಿರದ ವಿನ್ಯಾಸದ ಮುಗಿದಿದೆ. ಈ ಪರಿಶ್ರಮ ವ್ಯರ್ಥವಾಗಬಾರದೆಂಬ ಕಾಳಜಿಯನ್ನು ಹೊಂದಿದ್ದಾರೆ. ಉತ್ತರ ಪ್ರದೇಶದ ಜವನ್ ಪುರ ಜಿಲ್ಲೆಯ 70ರ ಪ್ರಾಯದ ರಾಧೇಶ್ಯಾಮ್ ಪಾಂಡೆ ಮತ್ತು ಪಂಡಿತ್ ತ್ರಿಫಲ ಅವರುಗಳು 1968 ರಿಂದ 151 ನದಿಗಳು ಹಾಗೂ ಮೂರು ಸಮುದ್ರಗಳಿಂದ ಸಂಗ್ರಹಿಸಿದ ಪವಿತ್ರ ಜಲವನ್ನು ಈ ಶಿಲಾನ್ಯಾಸಕ್ಕೆ ವಿನಿಯೋಗಿಸಲಾಗುತ್ತಿದೆ. ಶ್ರೀಲಂಕಾದ 16 ಸ್ಥಳಗಳಿಂದ ಮಣ್ಣನ್ನು ತರಲಾಗಿದೆ.

ಒಂಬತ್ತು ರತ್ನಗಳಿಂದ ಕೂಡಿದ ಚಿನ್ನದ ದಾರದಿಂದ ಪೋಣಿಸಿದ ಮೃದುವಾದ ಹಸಿರು ಬಣ್ಣದ ಮಕ್ಮಲ್ ಬಟ್ಟೆಯನ್ನು ಶ್ರೀ ರಾಮಲಲ್ಲಾ ವಿಗ್ರಹಕ್ಕೆ ಶಿಲಾನ್ಯಾಸ ಸಂದರ್ಭದಲ್ಲೂ, ಅನಂತರ ಕಿತ್ತಳೆ ಬಣ್ಣದ ಉಡುಪನ್ನು ಉಡಿಸಲಾಗುತ್ತದೆ. ಕಳೆದ ಮೂವತ್ತೈದಕ್ಕೂ ಹೆಚ್ಚು ವರ್ಷಗಳಿಂದ ದೇವತಾ ಉಡುಪನ್ನು ಮಾತ್ರ ಹೊಲಿಯುವ ದಿ. ಬಾಬುಲಾಲ್ ಅವರ ಮಕ್ಕಳಾದ ಶಂಕರ್ ಲಾಲ್ ಮತ್ತು ಭಗತ್ ಲಾಲ್ ಎಂಬ ಪಹಡಿ ಸೋದರರು ಈ ವಿಶಿಷ್ಟ ಬಗೆಯ ಉಡುಪನ್ನು ಸಿದ್ಧಗೊಳಿಸುತ್ತಿದ್ದಾರೆ. ಇದೇ ಮಾದರಿಯ ಬಟ್ಟೆಯನ್ನು ಲಕ್ಷ್ಮಣ, ಭರತ, ಶತ್ರುಘ್ನ, ಹನುಮಾನ್ ವಿಗ್ರಹಗಳಿಗೂ ತೊಡಿಸಲಾಗುತ್ತದೆ.

ಈ ಶಿಲಾನ್ಯಾಸ ದಿನವನ್ನು ಶ್ರೀರಾಮ ವಿಜಯ ಸಂಕಲ್ಪ ದಿನವೆಂದು ಹಬ್ಬದಂತೆ ಆಚರಿಸಲು ವಿಹಿಂಪ ಕರೆಕೊಟ್ಟಿದೆ. 108 ಬಾರಿ ಶ್ರೀರಾಮ ಜಯರಾಮ ಜಯಜಯ ರಾಮ ಎಂಬ ವಿಜಯ ಮಹಾವಿಜಯ ಮಂತ್ರವನ್ನು ಪಠಿಸಿ, ಭಜನೆ ಮಾಡುತ್ತಾ ಶಿಲಾನ್ಯಾಸ ಕಾರ್ಯಕ್ರಮವನ್ನು ಟಿವಿಯಲ್ಲಿ ನೋಡುತ್ತಾ ಸಿಹಿ ವಿತರಣೆ ಮಾಡಬೇಕು, ಸಂಜೆ ಆರೂವರೆಗೆ ಮನೆಮುಂದೆ ದೀಪಬೆಳಗಿ ಸಂಭ್ರಮಾಚರಣೆ ಮಾಡಬೇಕು ಎಂದು ವಿಹಿಂಪ ಕರೆಕೊಟ್ಟಿದೆ.

ಪ್ರಧಾನಿ ಮೋದಿ ಸಹಿತ ಮೋಹನ ಭಾಗವತ್, ಯುಪಿ ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಯೋಗಿ ಆದಿತ್ಯನಾಥ, ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಂತ ನೃತ್ಯ ಗೋಪಾಲದಾಸ್ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ. ಹಿರಿಯರಾದ ಅಡ್ವಾಣಿ, ಜೋಷಿ ಮುಂತಾದವರು ಪಾಲ್ಗೊಳ್ಳುತ್ತಾರೆ. ವಿಶೇಷ ಭದ್ರತಾ ಕೋಡ್ ಇರುವ ಕೇಸರಿ ಬಣ್ಣದ ಆಮಂತ್ರಣ ಪತ್ರಿಕೆ ಸಿದ್ಧವಾಗಿದ್ದು, 175 ಜನರಿಗೆ ಮಾತ್ರ ನೇರ ಕಾರ್ಯಕ್ರಮದಲ್ಲಿ ಆಹ್ವಾನವಿರುತ್ತದೆ.

ರಾಮಜನ್ಮಭೂಮಿ ಮತ್ತು ಬಾಬರಿ ಕಟ್ಟಡ ವಿವಾದದ ಮುಖ್ಯ ದಾವೇದಾರರಾದ ಇಕ್ಬಾಲ್ ಅನ್ಸಾರಿಗೆ ಮೊದಲ ಆಹ್ವಾನ ಪತ್ರಿಕೆ ನೀಡಲಾಗಿದೆ. ಇದು ಭಗವಾನ್ ಶ್ರೀರಾಮನ ಇಚ್ಛೆಯಾಗಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.

1989 ರಲ್ಲಿ ಈಗ 29 ವರ್ಷದ ಹಿಂದೆ ಮಂದಿರ ನಿರ್ಮಾಣವಾಗುವಾಗ ಅಯೋಧ್ಯೆಗೆ ಬರುತ್ತೇನೆಂದು ಸಂಕಲ್ಪ ಮಾಡಿದ ಮೋದಿಯವರು ಇಂದು 40ಕೆಜಿ ಬೆಳ್ಳಿಯ ಇಟ್ಟಿಗೆಯನ್ನು ಇಡುವ ಮೂಲಕ ಮಂದಿರ ಶಿಲಾನ್ಯಾಸವನ್ನು ಮಾಡಲಿದ್ದಾರೆ. ಕಾಶೀ ಚೌರಾಸಿಯಾ ಸಮುದಾಯದ ನಾಗೇಶ್ವರ ಅವರು ಭೂಮಿಪೂಜೆಗೆ ಬೆಳ್ಳಿಯಿಂದ ತಯಾರಿಸಿದ 5 ವೀಳ್ಯದೆಲೆಗಳನ್ನು ಬಳಸಲಾಗುತ್ತದೆ.

(ಟಿ ದೇವಿದಾಸ್ ವೈಚಾರಿಕ ಬರಹಗಾರರು.ಚಿಕ್ಕಮಗಳೂರಿನ        ಸಂಗಮೇಶ್ವರ ಪೇಟೆಯ ಪೂರ್ಣಪ್ರಜ್ಞಾ ಹೈಸ್ಕೂಲಿನಲ್ಲಿ ಅಧ್ಯಾಪಕರು)