ಬೆಳ್ತಂಗಡಿಗೆ ಬಂದಿಳಿಯಿತು ಬಾಂಗ್ಲಾ ವಿಮೋಚನೆಯಲ್ಲಿ ಹೋರಾಡಿದ T-55 ಟ್ಯಾಂಕ್ !

ಬೆಳ್ತಂಗಡಿ: ಧರ್ಮಸ್ಥಳದ ಪ್ರಸಿದ್ಧ ಮಂಜುಷಾ ವಸ್ತುಸಂಗ್ರಹಾಲಯದಲ್ಲಿ ಟಿ-55 ಯುದ್ಧ ಟ್ಯಾಂಕ್ ಇನ್ನು ಮುಂದೆ ಹೊಸ ಆಕರ್ಷಣೆಯಾಗಲಿದೆ. ಭಾರತದ ರಕ್ಷಣಾ ಸಚಿವಾಲಯವು ಮ್ಯೂಸಿಯಂಗೆ ಟ್ಯಾಂಕ್ ಅನ್ನು ಮಂಜೂರು ಮಾಡಿದ್ದು, ಪುಣೆಯ ಸೆಂಟ್ರಲ್ ಎ.ಎಫ್.ವಿ ಡಿಪೋದಿಂದ ಇದನ್ನು ನೀಡಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಮಂಗಳವಾರ ಬೆಳಗ್ಗೆ ಮ್ಯೂಸಿಯಂಗೆ ಆಗಮಿಸಿ ಯುದ್ದ ಟ್ಯಾಂಕ್ ಅನ್ನು ಪರಿಶೀಲಿಸಿದರು.

ಸೋವಿಯತ್-ನಿರ್ಮಿತ T-55 ಟ್ಯಾಂಕ್‌ಗಳನ್ನು 1968 ರಲ್ಲಿ ಭಾರತೀಯ ಸೇನೆಗೆ ಸೇರಿಸಲಾಯಿತು ಮತ್ತು 1971 ರ ಭಾರತ-ಪಾಕ್ ಯುದ್ಧದಲ್ಲಿ (ಬಾಂಗ್ಲಾದೇಶ ವಿಮೋಚನಾ ಯುದ್ಧ) ವ್ಯಾಪಕವಾಗಿ ಇದನ್ನು ಬಳಸಲಾಯಿತು. 2011 ರಲ್ಲಿ ಸೇವಾನಿವೃತ್ತಿ ಹೊಂದಿದ ಟ್ಯಾಂಕ್ ಗಳು ಸುಮಾರು 40 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿವೆ. ಎರಡನೆಯ ಮಹಾಯುದ್ಧದ ನಂತರದ ಅವಧಿಯಲ್ಲಿ ಸೋವಿಯತ್‌ ವಿನ್ಯಾಸಗೊಳಿಸಿದ ಟ್ಯಾಂಕ್‌ಗಳು ಅತ್ಯಂತ ದೃಢವಾದ ಮತ್ತು ಗಟ್ಟಿಮುಟ್ಟಾದ ಯುದ್ಧ ಟ್ಯಾಂಕ್‌ಗಳಲ್ಲಿ ಒಂದಾಗಿದೆ.

ಧರ್ಮಸ್ಥಳಕ್ಕೆ ತಮ್ಮ ಭೇಟಿಯ ಸಮಯದಲ್ಲಿ, ಜನರು ಈ ವಸ್ತುಸಂಗ್ರಹಾಲಯಕ್ಕೆ ತಪ್ಪದೆ ಭೇಟಿ ನೀಡುತ್ತಾರೆ. ಅಮ್ಮೋನೈಟ್ಸ್ ಪಳೆಯುಳಿಕೆಗಳಿಂದ ಹಿಡಿದು 8,000 ಕ್ಕೂ ಹೆಚ್ಚು ವಿಶಿಷ್ಟ ಕಲಾಕೃತಿಗಳು ಮತ್ತು ಶಿಲಾಯುಗದ ಉಪಕರಣಗಳು ಮರದ ಕೆತ್ತನೆಗಳು, ಸಂಗೀತ ಉಪಕರಣಗಳು ಮತ್ತು ಕ್ಯಾಮೆರಾಗಳನ್ನು ಈ ವಸ್ತುಸಂಗ್ರಹಾಲ ಹೊಂದಿದೆ. ಸರಿಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಈ ಮ್ಯೂಸಿಯಂಗೆ ಭೇಟಿ ನೀಡುತ್ತಾರೆ. ಇದೀಗ ಬಾಂಗ್ಲಾ ವಿಮೋಚನೆಯಲ್ಲಿ ಹೋರಾಡಿದ ಟ್ಯಾಂಕ್ ಗಳು ವಸ್ತುಸಂಗ್ರಹಾಲಯದ ಮೆರುಗನ್ನು ಹೆಚ್ಚಿಸಲಿವೆ.