ಬೆಂಗಳೂರು: ಪನ್ನೀರ್ ಪ್ರಿಯರಿಗೆ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಕೃತಕ ‘ಅನಲಾಗ್ ಪನ್ನೀರ್’ ಬಳಕೆಯನ್ನು ಒಂದು ವರ್ಷದ ಅವಧಿಗೆ ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಿದೆ.
ಸಾಮಾನ್ಯವಾಗಿ ಅಸಲಿ ಪನ್ನೀರ್‌ನ್ನು ಹಾಲು ಹಾಗೂ ಹಾಲಿನ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಆದರೆ, ವೆಚ್ಚ ಕಡಿಮೆ ಮಾಡಿ ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಕೆಲ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಹಾಲಿನ ಬದಲಿಗೆ ಸಸ್ಯಜನ್ಯ ಎಣ್ಣೆ, ಪಿಷ್ಟ ಹಾಗೂ ವಿವಿಧ ರಾಸಾಯನಿಕಗಳನ್ನು ಬಳಸಿ ‘ಅನಲಾಗ್ ಪನ್ನೀರ್’ ತಯಾರಿಸಿ ಗ್ರಾಹಕರಿಗೆ ನೀಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.
ಕೃತಕ ಪನ್ನೀರ್‌ನಲ್ಲಿ ಬಳಸುವ ಗುಣಮಟ್ಟವಿಲ್ಲದ ಕೊಬ್ಬಿನಾಂಶ ಹಾಗೂ ಇತರ ರಾಸಾಯನಿಕಗಳು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಲಿನ ಉತ್ಪನ್ನವಲ್ಲದ ಕೃತಕ ವಸ್ತುವನ್ನು ‘ಪನ್ನೀರ್’ ಹೆಸರಿನಲ್ಲಿ ಗ್ರಾಹಕರಿಗೆ ಮಾರಾಟ ಮಾಡುವುದು ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಆಹಾರ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಪನ್ನೀರ್ ತಯಾರಿಕೆಗೆ ಶುದ್ಧ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನಷ್ಟೇ ಬಳಸುವಂತೆ ನಿರ್ದೇಶಿಸಲಾಗಿದೆ. ಯಾವುದೇ ಕಾರಣಕ್ಕೂ ಕೃತಕ ‘ಅನಲಾಗ್ ಪನ್ನೀರ್’ ಬಳಸಬಾರದು ಎಂದು ಎಚ್ಚರಿಕೆ ನೀಡಿದೆ.
ಇದೇ ವೇಳೆ ರಾಜ್ಯಾದ್ಯಂತ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಡೈರಿಗಳ ಮೇಲೆ ವಿಶೇಷ ತಪಾಸಣೆ ಮತ್ತು ದಾಳಿ ನಡೆಸಲು ಇಲಾಖೆ ಮುಂದಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.















