ಇಷ್ಟು ಮಾಡಿದ್ರೆ ರಾತ್ರಿ ಗ್ಯಾರಂಟಿ ಸುಖ ನಿದ್ರೆ ಬರುತ್ತೆ:ಮಲಗುವ ಮುನ್ನ ಏನ್ ಮಾಡ್ಬೇಕು?

ನಿದ್ರೆ ಮಾಡೋದು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹೆಚ್ಚಿನವರು ಕೇವಲ ದೇಹಕ್ಕೆ ಸುಸ್ತಾದಾಗ ಮಾತ್ರವಲ್ಲ ಮನಸ್ಸಿಗೆ ಸುಸ್ತಾದಾಗ ಅಂದರೆ ಬೇಜಾರಾದಾಗ, ಸಿಟ್ಟು ಬಂದಾಗ  ನಿದಿರಾದೇವಿಯ ಮೊರೆ ಹೋಗಲಿಚ್ಛಿಸುತ್ತಾರೆ. ಹೌದು, ನಿದ್ರೆ ದೇಹಕ್ಕೂ ಮನಸ್ಸಿನಾರೋಗ್ಯಕ್ಕೂ ದಿವ್ಯೌಷಧ. ಶಾಂತಚಿತ್ತದಿಂದ ನಿದ್ರಿಸುವ ವ್ಯಕ್ತಿ ದೀರ್ಘಕಾಲ ಆರೋಗ್ಯವಂತನಾಗಿ ಬಾಳುತ್ತಾನೆ ಎಂದು ಅನೇಕ ಸಮೀಕ್ಷೆಗಳು ಹೇಳುತ್ತವೆ. ದಿನಕ್ಕೆ ಕನಿಷ್ಟ ಎಂಟು ಗಂಟೆಗಳ ನಿದ್ರೆ ಅವಶ್ಯಕ. ಸಾಧ್ಯವಾಗದಿದ್ದರೆ, ಕನಿಷ್ಠಪಕ್ಷ ಮಾಡುವ ಕೆಲವು ಗಂಟೆಗಳ ನಿದ್ರೆಯನ್ನಾದರೂ ನೆಮ್ಮದಿಯಿಂದ ಮಾಡಿದರೆ ಇಡೀ ದಿನ ಲವಲವಿಕೆಯಿಂದಿರಲು ಸಾಧ್ಯ.

ಹಾಗಾದರೆ ನೆಮ್ಮದಿಯ ನಿದ್ರೆಗೆ ಜಾರುವ ಮೊದಲು ಏನೇನು ಮಾಡ್ಬೋದು ನೋಡಣ ಬನ್ನಿ

  • ಮಲಗುವ ಕನಿಷ್ಟ ಒಂದು ಗಂಟೆಯ ಮೊದಲು ಆಹಾರ ಸೇವಿಸಿ, ವಾಕಿಂಗ್ ಮಾಡಿ ಹಾಗೂ ಮೊಬೈಲ್ ನಿಂದ ದೂರವಿರಿ.
  • ರೂಮ್ ನಲ್ಲಿ ಗಾಳಿ ಚೆನ್ನಾಗಿ ಆಡುತ್ತಿರಲಿ, ಮಲಗುವ ಸ್ಥಳ ಸ್ವಚ್ಛವಾಗಿರಲಿ.
  • ಹಾಸಿಗೆಯ ಮೇಲೆ ಕುಳಿತುಕೊಂಡು ಅಥವಾ ಮಲಗಿಕೊಂಡೇ ಆ ದಿನದ ದಿನಚರಿಯ ಬಗ್ಗೆ ಮೆಲುಕು ಹಾಕುವುದು.
  • ಸ್ಪೂರ್ತಿ ಕೊಟ್ಟ ವಿಷಯಗಳ ಬಗ್ಗೆ ಮತ್ತೊಮ್ಮೆ ಯೋಚಿಸಿ ಆ ಖುಷಿಯನ್ನು ಅನುಭವಿಸುವುದು.
  • ನಿಮಗೆ ಸಹಾಯ ಮಾಡಿದ ವ್ಯಕ್ತಿಗಳನ್ನು ಸ್ಮರಿಸಿಕೊಂಡು ಮನಸ್ಸಿನಲ್ಲಿಯೇ ಅವರಿಗೆ ಕೃತಜ್ಞತೆ ಅರ್ಪಿಸುವುದು.
  • ನೀವು ಪಡೆದ ಸಹಾಯವನ್ನು ಯಾವುದಾದರೂ ಸಂದರ್ಭದಲ್ಲಿ ಅವಶ್ಯತೆ ಇದ್ದವರಿಗೆ ಮರಳಿ ಸಹಾಯ ಮಾಡುವ ನಿರ್ಧಾರ ಮಾಡುವುದು.
  • ಬೇಸರದ ಘಟನೆಗಳೇನಾದರೂ ನಡೆದಿದ್ದಲ್ಲಿ ಅದಕ್ಕೆ ಸೂಕ್ತ ಉತ್ತರ ಅಥವಾ ಪರಿಹಾರ ಕಂಡುಕೊಂಡು ಮನಸ್ಸಿನ ನೆಮ್ಮದಿ ಕಾಪಾಡಿಕೊಳ್ಳುವುದು.

  • ಸಮಸ್ಯೆಗಳೇನಾದರೂ ಎದುರಾಗಿದ್ದಲ್ಲಿ ಹೆಚ್ಚು ಚಿಂತಿಸದೇ ಧೃತಿಗೆಡದೇ, ಧೈರ್ಯ ತಂದುಕೊಂಡು ಮುಖದಲ್ಲಿ ಮುಗುಳ್ನಗೆಯೊಂದಿಗೆ ನಿದ್ರಿಸಿದರೆ, ಮಾರನೆಯ ದಿನ ಬೆಳಗ್ಗೆ ಏಳುವಷ್ಟರಲ್ಲಿ ತನ್ನಿಂದ ತಾನೇ ಸಮಸ್ಯೆಗೆ ಪರಿಹಾರ ದೊರಕಿರುತ್ತದೆ.
  • ಎರಡು ನಿಮಿಷಗಳ ಕಾಲ ಉಸಿರಿನೆಡೆಗೇ ಗಮನ ಕೊಟ್ಟು, ದೀರ್ಘ ಉಸಿರಾಟ ನಡೆಸಿ ನಿದ್ರೆಗೆ ಜಾರಿದರೆ ನೆಮ್ಮದಿಯ ನಿದ್ರೆ ಖಂಡಿತಾ.