ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪುಟ ವಿಸ್ತರಣೆಗೆ ತೆರೆ ಬಿದ್ದಿದ್ದು, ಇಂದು (ಆಗಸ್ಟ್ 3) ಸಂಜೆ 4.05ಕ್ಕೆ ಲೋಕಭವನದಲ್ಲಿ 20 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಪೂರ್ಣ ಪ್ರಮಾಣದ ಸಚಿವ ಸಂಪುಟ ಇಂದಿನಿಂದ ಕಾರ್ಯಾರಂಭ ಮಾಡಲಿದೆ.
ಸಚಿವ ಸ್ಥಾನಕ್ಕಾಗಿ ಹಲವು ತಿಂಗಳುಗಳಿಂದ ನಡೆದ ರಾಜಕೀಯ ಚರ್ಚೆ, ಲಾಬಿ ಮತ್ತು ಹೈಕಮಾಂಡ್ ಮಟ್ಟದ ಸಮಾಲೋಚನೆಗಳ ಬಳಿಕ ಕಾಂಗ್ರೆಸ್ ಅಂತಿಮವಾಗಿ 20 ಶಾಸಕರನ್ನು ಸಚಿವರಾಗಿ ಆಯ್ಕೆ ಮಾಡಿದೆ.
ಇದರ ಜೊತೆಗೆ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಹಿರಿಯ ಶಾಸಕ ಜೆ.ಎಸ್. ಪಾಟೀಲ್, ಉಪಸಭಾಧ್ಯಕ್ಷರಾಗಿ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸಭಾಪತಿಯಾಗಿ ಸಲೀಂ ಅಹ್ಮದ್ ಹಾಗೂ ಉಪಸಭಾಪತಿಯಾಗಿ ಉಮಾಶ್ರೀ ಅವರನ್ನು ಅಂತಿಮಗೊಳಿಸಲಾಗಿದೆ.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವವರು
- ಪಿ.ಎಂ. ನರೇಂದ್ರಸ್ವಾಮಿ (ಮಳವಳ್ಳಿ)
- ಶಿವರಾಜ್ ತಂಗಡಗಿ
- ರುದ್ರಪ್ಪ ಲಮಾಣಿ
- ಕೆ.ಎಸ್. ಬಸವಂತಪ್ಪ
- ಬಿ. ನಾಗೇಂದ್ರ
- ಟಿ. ರಘುಮೂರ್ತಿ
- ಜಮೀರ್ ಅಹ್ಮದ್ ಖಾನ್
- ರಿಜ್ವಾನ್ ಅರ್ಷದ್
- ಸಂತೋಷ್ ಲಾಡ್
- ಮಧು ಬಂಗಾರಪ್ಪ
- ಪುತ್ತರಂಗಶೆಟ್ಟಿ
- ಎಸ್.ಎಸ್.ಮಲ್ಲಿಕಾರ್ಜುನ್
- ಡಾ. ಅಜಯ್ ಸಿಂಗ್
- ಎನ್. ಚಲುವರಾಯಸ್ವಾಮಿ
- ಕೆ.ಎಂ. ಶಿವಲಿಂಗೇಗೌಡ
- ಹೆಚ್.ಸಿ. ಬಾಲಕೃಷ್ಣ
- ಗಾಯತ್ರಿ ಶಾಂತೇಗೌಡ (ಎಂಎಲ್‌ಸಿ)
- ಬಸವರಾಜ್ ರಾಯರೆಡ್ಡಿ
- ವಿಜಯಾನಂದ್ ಕಾಶಪ್ಪನವರ್
- ಲಕ್ಷ್ಮಣ್ ಸವದಿ
ಇವರು ಇಂದು ಸಂಜೆ ಲೋಕಭವನದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಲೋಕಭವನ ಸುತ್ತಮುತ್ತ ಬಿಗಿ ಭದ್ರತೆ
ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ಲೋಕಭವನದ ಸುತ್ತಮುತ್ತ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದ್ದು, 665ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಲೋಕಭವನ ಸುತ್ತಮುತ್ತ ಸಂಚಾರ ನಿಯಂತ್ರಣ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.















