ಜ. 12 ರಂದು ಶಾಲಾ ಮಕ್ಕಳಿಂದ ‘ಸ್ವಚ್ಛ ಉಡುಪಿ’ ಬೃಹತ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಉಡುಪಿ: ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಪ್ಲಾಸ್ಟಿಕ್ ಮತ್ತು ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ಜ. 12 ರಂದು ಭಾರತ ಸೇವಾದಳ ಉಡುಪಿ ಜಿಲ್ಲಾ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ರಜತೋತ್ಸವ ಸಮಿತಿಯ ಸಹಯೋಗದೊಂದಿಗೆ ಜಿಲ್ಲೆಯ ಎಲ್ಲಾ 1096 ಸರಕಾರಿ, ಅನುದಾನಿತ ಮತ್ತು ಖಾಸಗಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸುಮಾರು 1,60,000 ಶಾಲಾ ಮಕ್ಕಳಿಂದ ಏಕಕಾಲದಲ್ಲಿ ಆಯಾಯ ಶಾಲೆಗಳ ಅಕ್ಕ ಪಕ್ಕದ ವಠಾರದಲ್ಲಿ “ಸ್ವಚ್ಛ ಉಡುಪಿ” ಎಂಬ ಶೀರ್ಷಿಕೆಯೊಂದಿಗೆ ಸ್ವಚ್ಛತಾ ಮತ್ತು ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಲಲಾಗಿದೆ ಎಂದು ಭಾರತ ಸೇವಾದಳದ ಉಡುಪಿ ಜಿಲ್ಲಾ ಸಮಿತಿಯ ಅಧ್ಯಕ್ಷ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಹೇಳಿದರು.

ಅವರು ಸೋಮವಾರದಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ “ಕಸದಿಂದ ರಸ” ಕಲ್ಪನೆಯೊಂದಿಗೆ ಮಕ್ಕಳಲ್ಲಿ ತ್ಯಾಜ್ಯದ ಮರುಬಳಕೆಯನ್ನು ಪ್ರೋತ್ಸಾಹಿಸಲು ಕಸ-ತ್ಯಾಜ್ಯದಿಂದ ಕಲೆ, ಕರಕುಶಲ ಹಾಗೂ ಉಪಯುಕ್ತ ವಸ್ತುಗಳನ್ನು ತಯಾರಿಸುವ  ವಿಶೇಷ ಸ್ಪರ್ಧೆಯನ್ನು ಮಕ್ಕಳಿಗೆ ಶಾಲಾ ಮಟ್ಟದಲ್ಲಿ ಆಯೋಜಿಸಲಾಗುವುದು. ಪ್ರಥಮ ಮೂರು ಸ್ಥಾನ ಪಡೆದ ಶಾಲೆಗಳಿಗೆ ವಿಶೇಷ ಟ್ರೋಫಿಯನ್ನು ನೀಡಲಾಗುವುದು. ಕಾರ್ಯಕ್ರಮದ ಪ್ರಚಾರ ಸೇರಿದಂತೆ ಆಯೋಜನೆಯ ಎಲ್ಲಾ ಸಾಮಗ್ರಿಗಳು ಸಂಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿರುತ್ತದೆ ಎಂದರು.

ಡಿ. 12ರಂದು ಉಡುಪಿ ನಗರಸಭೆಯ ಸಹಯೋಗದೊಂದಿಗೆ ಬೆಳಿಗ್ಗೆ 9 ರಿಂದ 10.30 ಗಂಟೆಯವರೆಗೆ ಅಭಿಯಾನದ ಉದ್ಘಾಟನಾ ಸಮಾರಂಭ ಚಿಟ್ಪಾಡಿಯ ದೇವಾಡಿಗರ ಸಭಾ ಭವನದಲ್ಲಿ ನಡೆಯಲಿದೆ. ಸುಮಾರು 500 ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲುಗೊಳ್ಳುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ತ್ಯಾಜ್ಯದ ಬಗ್ಗೆ ಮಕ್ಕಳಿಗೆ ಮಾಹಿತಿ, ನಿರ್ವಹಣೆ ಮತ್ತು ಕಳಕಳಿಯ ಪ್ರಾತ್ಯಕ್ಷಿಕೆ ಮೂಲಕ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ.

ಪ್ರಧಾನಿ ಮೋದಿ ಅವರ ಸ್ವಚ್ಛ ಭಾರತ್ ಮಿಷನ್ ಅನ್ನು ಸಾಕಾರಗೊಳಿಸುವ ಮತ್ತು ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಸ್ವಚ್ಛತೆ ಮತ್ತು ತ್ಯಾಜ್ಯದ ಸಮರ್ಪಕ ನಿರ್ವಹಣೆ ಬಗ್ಗೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ದೇಶದಲ್ಲೇ ಅತೀ ದೊಡ್ಡ ಮಟ್ಟದ ಸ್ವಚ್ಛತಾ ಮತ್ತು ಜಾಗೃತಿ ಅಭಿಯಾನ ಇದಾಗಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಾರತ ಸೇವಾಳದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ತಿಮ್ಮಪ್ಪ ಶೆಟ್ಟಿ ಆರೂರ್, ಪುಂಡಲೀಕ ಮರಾಠೆ ಮತ್ತು ಜಿಲ್ಲಾ ಸಂಘಟಕ ಫಕ್ಕಿರ್ ಗೌಡ ಹಳೇಮನಿ ಹಾಜರಿದ್ದರು.