“ಸುವರ್ಣ ತ್ರಿಭುಜ” ಬೋಟ್ ನಾಪತ್ತೆ ಪ್ರಕರಣ, ರಾಜ್ಯ ಸರಕಾರದ ನಿರ್ಲಕ್ಷ್ಯ: ಯಶ್ ಪಾಲ್ ಸುವರ್ಣ

“ಸುವರ್ಣ ತ್ರಿಭುಜ” ಬೋಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ನಿರ್ಲಕ್ಷ್ಯ ವಹಿಸಿದೆ. ಬೋಟ್ ಪತ್ತೆ ಮಾಡಲು ಯಾವುದೇ ತುರ್ತು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ದೂರಿದರು.
ಕರಾವಳಿ ಕಾವಲು ಪಡೆಯಲ್ಲಿ ಈಜು ಬರುವ ಹಾಗೂ ಪರಿಣತಿ ಹೊಂದಿದ ಸಿಬ್ಬಂದಿಗಳಲ್ಲಿ. ಅಲ್ಲದೆ ಇಂತಹ ತುರ್ತು ಅವಘಡಗಳು ಸಂಭವಿಸಿದಂತಹ ಸಂದರ್ಭದಲ್ಲಿ ತುರ್ತು ಕಾರ್ಯಾಚರಣೆ ಮಾಡಲು ಬೇಕಾದ ಸೂಕ್ತ ವ್ಯವಸ್ಥೆ ಸಹ ಇಲ್ಲ. ಹಾಗಾಗಿ ಬೋಟ್ ಪತ್ತೆ ಕಾರ್ಯ ವಿಳಂಬವಾಗುತ್ತಿದೆ. ಆಳ ಸಮುದ್ರಕ್ಕೆ ತೆರಳುವ ಬೋಟ್ ಗಳಲ್ಲಿ 15ದಿನಗಳಿಗೆ ಬೇಕಾಗುವ ರೇಷನ್ ಇರುತ್ತದೆ. ಆದರೆ ಬೋಟ್ ನಾಪತ್ತೆಯಾಗಿ ಇಂದಿಗೆ 15 ದಿನಗಳು ಕಳೆದಿವೆ. ಹಾಗಾಗಿ ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಬೋಟ್ ಪತ್ತೆ ಮಾಡಲು ಕ್ರಮಕೈಗೊಳ್ಳಬೇಕು ಹಾಗೂ ಮೀನುಗಾರಿಕಾ ಸಚಿವರು ಶೀಘ್ರ ನಾಪತ್ತೆಯಾಗಿರುವ ಮೀನುಗಾರರ ಮನೆಗಳಿಗೆ ಭೇಟಿ ನೀಡಿ, ಕುಟುಂಬದವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಆಗ್ರಹಪಡಿಸಿದರು.