ಉಡುಪಿ: ಮೀನುಗಾರರಿಗೆ ರಕ್ಷಣೆ ನೀಡುವುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆದ್ಯ ಕರ್ತವ್ಯ. ಆದ್ದರಿಂದ ಕಳೆದ 19 ದಿನಗಳಿಂದ ಕಣ್ಮರೆಯಾಗಿರುವ ಮೀನುಗಾರರ ರಕ್ಷಣೆಗೆ ಸರಕಾರ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಗ್ರಹ ಪಡಿಸಿದರು.
ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಹಾಗೂ ಏಳು ಮಂದಿ ಮೀನುಗಾರರ ಕಣ್ಮರೆಯಾಗಿ 19 ದಿನಗಳು ಕಳೆದರೂ ಇನ್ನು ಪತ್ತೆಯಾಗದ ಹಿನ್ನೆಲೆಯಲ್ಲಿ ಶ್ರೀಪಾದರು ಇಂದು ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ ನೀಡಿ ಮೀನುಗಾರ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.
ನಾನು ಪ್ರವಾಸದಲ್ಲಿದ್ದ ಕಾರಣ ನನಗೆ ಮೀನುಗಾರರು ನಾಪತ್ತೆಯಾಗಿರುವ ವಿಚಾರ ಗೊತ್ತಾಗಲಿಲ್ಲ. ಈ ವಿಚಾರ ತಿಳಿದಿದ್ದರೆ ಮೊನ್ನೆ ರಾಷ್ಟ್ರಪತಿಗಳು ಶ್ರೀಕೃಷ್ಣಮಠಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿಯೇ ಅವರಿಗೆ ತಿಳಿಸುತ್ತಿದ್ದೆ. ಮೀನುಗಾರರು ಕಣ್ಮರೆಯಾಗಿರುವುದು ಬಹಳಷ್ಟು ಆತಂಕ ಆಗಿದೆ. ಮೀನುಗಾರರನ್ನು ಶೀಘ್ರವಾಗಿ ಪತ್ತೆ ಮಾಡುವಂತೆ ಕೇಂದ್ರ ಗೃಹ ಸಚಿವರು, ಮುಖ್ಯಮಂತ್ರಿಗಳು ಹಾಗೂ ಉಸ್ತುವಾರಿ ಸಚಿವರಲ್ಲಿ ಮಾತನಾಡುತ್ತೇನೆ. ಮೀನುಗಾರರ ರಕ್ಷಣೆಗೆ ಶೀಘ್ರವಾಗಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದರು.
ಸರಕಾರ ರಾಮನನ್ನು ನಿತ್ಯ ಬೈಯುವ ವ್ಯಕ್ತಿಗೆ (ಭಾಗವನ್) ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರಕ್ಷಣೆ ನೀಡುತ್ತದೆ. ಆದರೆ ದೇಶದ ಉತ್ಪಾದನೆ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೀನುಗಾರರ ಬಗ್ಗೆ ಸರಕಾರ ಅಸಡ್ಡೆ, ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಮೀನುಗಾರ ರಕ್ಷಣೆಗೆ ಸರಕಾರ ಮುತುರ್ವಜಿ ವಹಿಸಬೇಕು. ಈ ಘಟನೆ ಶತ್ರುಗಳಿಂದ ಆಗಿದೆಯೋ, ಬೇರೆ ಯಾವುದೇ ಕಾರಣ ಇದೆಯೋ ಗೊತ್ತಿಲ್ಲ. ಹಾಗಾಗಿ ಮೀನುಗಾರರ ರಕ್ಷಣೆಗೆ ಸರಕಾರ ಆದಷ್ಟು ಬೇಗ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮೊಗವೀರ ಸಮಾಜಕ್ಕೂ ಅಷ್ಟಮಠಗಳಿಗೂ ನಿಕಟ ಸಂಪರ್ಕ ಇದೆ. ಶ್ರೀಕೃಷ್ಣ ಮಠ ಹಾಗೂ ಅಷ್ಟಮಠಗಳಿಗೆ ಮೊಗವೀರರು ಸೈನಿಕರಿದ್ದಂತೆ. ಯಾವುದೇ ಸಮಸ್ಯೆ, ಆತಂಕ ಎದುರಾದಾಗ ಮೊದಲು ಎದುರಿಗೆ ಬರುವುದೇ ಮೊಗವೀರ ಸಮಾಜ. ಮೊಗವೀರರು ಅಷ್ಟಮಠಗಳಿಗೆ ಎಲ್ಲ ಸಮಯದಲ್ಲೂ ಸಹಕಾರ, ಬೆಂಬಲ ನೀಡುತ್ತಾರೆ ಎಂದ ಹೇಳಿದರು.
ಮೀನುಗಾರರು ಆತಂಕ ಪಡುವುದು ಬೇಡ. ನಾನು ನಿಮ್ಮೊಂದಿಗೆ ಇದ್ದೇನೆ. ಮೀನುಗಾರರ ರಕ್ಷಣೆಗೆ ಯಾವ ರೀತಿಯ ಹೋರಾಟ ಮಾಡಿದರು ನಾನು ಸಿದ್ಧವಾಗಿದ್ದೇನೆ. ಮೀನುಗಾರರು ಸುರಕ್ಷಿತವಾಗಿ ವಾಪಸ್ಸು ಬರುವಂತೆ ಪ್ರತಿದಿನ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮಾತನಾಡಿ, ನಾಪತ್ತೆಯಾಗಿರುವ ಮೀನುಗಾರರ ರಕ್ಷಣೆಗೆ ಕೂಡಲೇ ಸ್ಪಂದಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ಮೇಲೆ ಒತ್ತಡ ತರಬೇಕೆಂದು ಪೇಜಾವರ ಶ್ರೀಗಳಲ್ಲಿ ಮನವಿ ಮಾಡಿದರು. ಮಲ್ಪೆ ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಹಿರಿಯಣ್ಣ ಕಿದಿಯೂರು, ಮುಖಂಡ ಗೋಪಾಲ ಆರ್.ಕೆ. ಇದ್ದರು.