ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ ಜ.6ರಂದು ಮೀನುಗಾರರಿಂದ ಕರಾವಳಿಯಾದ್ಯಂತ ಪ್ರತಿಭಟನೆ

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ‘ಸುವರ್ಣ ತ್ರಿಭುಜ’ ಬೋಟ್ ಹಾಗೂ 7 ಮೀನುಗಾರರು ಕಣ್ಮರೆಯಾಗಿ 19 ದಿನಗಳು ಕಳೆದರೂ ಬೋಟ್ ಮತ್ತು ಮೀನುಗಾರರನ್ನು ಪತ್ತೆ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ವೈಫಲ್ಯತೆಯನ್ನು ಖಂಡಿಸಿ ಹಾಗೂ ಪ್ರಕರಣವನ್ನು ಶೀಘ್ರವಾಗಿ ಪತ್ತೆ ಮಾಡುವಂತೆ ಒತ್ತಾಯಿಸಿ ಜ.6ರಂದು  ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೀನುಗಾರಿಕೆ ಸ್ಥಗಿತಗೊಳಿಸಿ ರಾಷ್ಟ್ರೀಯ ಹೆದ್ದಾರಿ 66 ಅನ್ನು ತಡೆದು ಪ್ರತಿಭಟನೆ ಮಾಡಲು ಮೀನುಗಾರರು ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಿದ್ದಾರೆ.
ಮಲ್ಪೆ ಮೀನುಗಾರರ ಸಂಘ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿವಿಧ ಮೀನುಗಾರರ ಸಂಘಟನೆಗಳ ನೇತೃತ್ವದಲ್ಲಿ ಮಲ್ಪೆ ಬಂದರಿನಲ್ಲಿ ಬುಧವಾರ ನಡೆದ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ದಕ್ಷಿಣ ಕನ್ನಡ  ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ ಮಾತನಾಡಿ,  ಸರಕಾರ ಮೀನುಗಾರರ ಬದುಕಿನ ಜೊತೆಗೆ ಚೆಲ್ಲಾಟ ಆಡುತ್ತಿದೆ. ಡಿ. 13ರಂದು ಬೋಟ್ ನಾಪತ್ತೆಯಾಗಿದ್ದರೂ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮಾತನಾಡಿ, ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿ 19 ದಿನಗಳು ಕಳೆದರೂ ಸರಕಾರ ಮಾತ್ರ ಇದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸುವರ್ಣ ತ್ರಿಭುಜ ಬೋಟ್ ಹಾಗೂ 7 ಮೀನುಗಾರರು ಕಣ್ಮರೆಯಾದ ಘಟನೆ ನಡೆದ ಬಳಿಕ ಮೀನುಗಾರರು ಮೀನುಗಾರಿಕೆಗೆ ತೆರಳಲು ಭಯಪಡುತ್ತಿದ್ದಾರೆ. ಕಳೆದ 8 ದಿನಗಳಿಂದ ಒಂದು ಸಾವಿರಕ್ಕೂ ಆಳ ಸಮುದ್ರ ಮೀನುಗಾರಿಕಾ ಬೋಟ್ ಗಳು ಹಾಗೂ 130 ಪರ್ಸಿನ್‌ ಬೋಟ್ ಗಳು ಮೀನುಗಾರಿಕೆಗೆ ಹೋಗದೆ, ಬಂದರಿನಲ್ಲಿಯೇ ಲಂಗಾರು ಹಾಕಿವೆ. ಇದರಿಂದ ಈಗಾಗಲೇ ಮೀನುಗಾರಿಕೆ ತೆರಳಿರುವ ಬೋಟ್ ಗಳು ಮಲ್ಪೆ ಬಂದರಿಗೆ ಹರಸಾಹಸ ಪಡುತ್ತಿವೆ‌ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌ ತಿಳಿಸಿದರು.
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಜ. 6ರಂದು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಮೂರು ಜಿಲ್ಲೆಯ 25 ಸಾವಿರಕ್ಕೂ ಹೆಚ್ಚಿನ ಮೀನುಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಮೀನುಗಾರರ ನಿರ್ಲಕ್ಷ:
ಮೀನುಗಾರರ ಮುಖಂಡ ರವಿರಾಜ್‌ ಸುವರ್ಣ ಮಾತನಾಡಿ, ಮೀನುಗಾರರು ತಮ್ಮ ಪ್ರಾಣ ಪಣಕ್ಕಿಟ್ಟು ಮೀನುಗಾರಿಕೆ ಮಾಡುತ್ತಾರೆ. ಆದರೆ ಇಂದು ತಮ್ಮ ಪ್ರಾಣ ಉಳಿಸಿಕೊಳ್ಳಲು ಬೀದಿಗೆ ಬರುವಂತಾಗಿದೆ. ಮನೆ ಮನೆಗೆ ಹೋಗಿ ಗ್ರಾಮ ವಾಸ್ತವ್ಯ ಮಾಡುವ ಮುಖ್ಯಮಂತ್ರಿ ನಮ್ಮ ಮನೆಗಳಿಗೂ ಬಂದು ವಾಸ್ತವ್ಯ ಮಾಡಲಿ. ನಮ್ಮ ಸಂಕಷ್ಟಗಳನ್ನು ತಿಳಿದುಕೊಳ್ಳಲಿ. ಮೀನುಗಾರರನ್ನು ನಿರ್ಲಕ್ಷ್ಯ ಮಾಡಿದರೆ ಈ ಸರಕಾರಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಕೆ ನೀಡಿದರು.
ಮೀನುಗಾರ ಸಂಘಟನೆಗಳ ಮುಖಂಡರಾದ ಕಿಶೋರ್ ಡಿ. ಸುವರ್ಣ, ನಿತಿನ್ ಕುಮಾರ್, ಬೇಬಿ ಸಾಲಿಯಾನ್, ರಾಮ ಕಾಂಚನ್, ರಾಮ ಅಮೀನ್, ಗೋಪಾಲ ಭಟ್ಕಳ, ಇಬ್ರಾಹಿಂ ಬೇಂಗ್ರೆ, ವಿನಯ ಕರ್ಕೇರ, ವಾಸುದೇವ ಬೋಳಾರ್, ಅಂಗಾರಕಟ್ಟೆ ಬಿ.ಬಿ. ಕಾಂಚನ್, ರಮೇಶ್ ಕುಂದರ್, ಮಂಜು ಬಿಲ್ಲವ ಹಾಜರಿದ್ದರು.