ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಸುವರ್ಣ ತ್ರಿಭುಜ ಬೋಟಲ್ಲಿ ತೆರಳಿದ್ದ ಏಳು ಮಂದಿ ಮೀನುಗಾರರು ಕಣ್ಮರೆಯಾಗಿ ಒಂದು ತಿಂಗಳು ಕಳೆದಿದೆ. ಆದರೆ ಇಲ್ಲಿಯವರೆಗೆ ನಾಪತ್ತೆಯಾದವರ ಬಗ್ಗೆ ಒಂದು ಸುಳಿವು ಕೂಡ ಸಿಕ್ಕಿಲ್ಲ.
ಡಿಸೆಂಬರ್ 15 ರಂದು ಮಲ್ಪೆಯ `ಸುವರ್ಣ ತ್ರಿಭುಜ’ ಬೋಟು ಸಂಪರ್ಕ ಕಡಿತವಾಗಿತ್ತು. ಬಳಿಕ ಆ ಭಾಗದಲ್ಲಿ ಸಂಚರಿಸಿದ ಎಲ್ಲಾ ಹಡಗುಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಒಂದು ಮೂಲದ ಪ್ರಕಾರ ಆ ಭಾಗದಲ್ಲಿ ಹಾದು ಹೋದ ಹಡಗಿನ ಮೂಲಕ ಒಂದು ವಯರ್ ಲೆಸ್ ಮೆಸೇಜ್ ಹೋಗಿದೆ. ಆ ಮೆಸೇಜಿನಲ್ಲಿ ಬೋಟು ಅಪಘಾತದ ಬಗ್ಗೆ ಪ್ರಸ್ತಾಪವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪೊಲೀಸರಿಂದ ನಿರಂತರ ತನಿಖೆ:
ಆ ಹಡಗು ಯಾವುದು? ಅವರು ನೋಡಿದ ಬೋಟು ಅಪಘಾತ ಯಾವುದು? ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಉಡುಪಿ ಪೊಲೀಸರು ತನಿಖೆ ಮುಂದುವರಿಸಿದ್ದು, ಉಡುಪಿ ಎಸ್.ಪಿ ಮಾಲ್ವಾನ್ ಹಾಗೂ ಮಹಾರಾಷ್ಟ್ರದ ದೇವಘಡ ಎಸ್.ಪಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಲಿನ ಮೀನುಗಾರ ಸಂಘಗಳಿಂದ ಸ್ಥಳೀಯ ಪೊಲೀಸ್ ಠಾಣೆಯ ಮೂಲಕ ಮಾಹಿತಿಯನ್ನು ಕೂಡ ಕಲೆ ಹಾಕುತ್ತಿದ್ದಾರೆ.
ಮೀನುಗಾರರು ಕೊಟ್ಟ ಗಡುವು ಮುಗಿದಿದೆ:
ಜಿಲ್ಲೆಯಲ್ಲಿ ಕಳೆದ ಭಾನುವಾರ ಮೀನುಗಾರರ ಪತ್ತೆಗೆ ಬೃಹತ್ ಪ್ರತಿಭಟನೆ ನಡೆಸಿ, ಮೀನುಗರರು ಒಂದು ವಾರದ ಗಡುವು ನೀಡಿದ್ದರು. ಈಗ ಮೀನುಗಾರರು ಕೊಟ್ಟ ಸಮಯ ಮುಗಿದಿದೆ. ಆದರೆ ಪೊಲೀಸ್ ತನಿಖೆ ನಿರ್ಣಾಯಕ ಘಟ್ಟದಲ್ಲಿ ಇರುವುದರಿಂದ ಮತ್ತೆ ಮೂರು ದಿನ ಕಾಯಲು ಮೀನುಗಾರರ ಸಂಘಟನೆ ನಿರ್ಧರಿಸಿದೆ. ಸದ್ಯ ಮಹಾರಾಷ್ಟ್ರದ ಮಾಲ್ವಾನಲ್ಲೇ ತನಿಖೆಯನ್ನು ಕೇಂದ್ರೀಕರಿಸಲಾಗಿದೆ.