ಉಡುಪಿ ಕೃಷ್ಣಮಠದ ಸುತ್ತ ಪೌಳಿ ಲೋಕಾರ್ಪಣೆ: ಕೃಷ್ಣ ದೇವರ ಸಂದೇಶ ಜಗತ್ತಿಗೆ ಪಸರಿಸಿದ ಕೀರ್ತಿ ಪುತ್ತಿಗೆ ಶ್ರೀಗಳಿಗೆ ಸಲ್ಲುತ್ತದೆ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದರು. ಬೆಳಗಿನ ಜಾವ ಅವರ ತಂದೆ ತಾಯಿಯೊಂದಿಗೆ ಆಗಮಿಸಿ ಶ್ರೀ ಕೃಷ್ಣನ ದರ್ಶನ ದರ್ಶನ ಪಡೆದರು. ನಂತರ ಪಾಕಶಾಲೆಗೆ ಭೇಟಿ ನೀಡಿ ಶ್ರೀ ಕೃಷ್ಣನ ಪ್ರಸಾದವನ್ನು ತಯಾರಿಕೆಗೆ ಚಾಲನೆ ನೀಡುವುದರೊಂದಿಗೆ ಸಾಮಾನ್ಯ ಗೃಹಿಣಿಯರಂತೇ ದೇವರ ನೈವೇದ್ಯದ ಪಾತ್ರೆ ತೊಳೆದು ಮಠದ ಗೋಶಾಲೆಗೆ ಭೇಟಿ ನೀಡಿ ಗೋಪೂಜೆ ನೆರವೇರಿಸಿದರು.
ನಂತರ ಕೃಷ್ಣ ಮಠದ ಸುತ್ತ ನಿರ್ಮಿಸಿರುವ ಕರಾವಳಿ ವಾಸ್ತುಶೈಲಿಯ ಸುತ್ತ ಪೌಳಿಯನ್ನು ಲೋಕಾರ್ಪಣೆಗೊಳಿಸಿದರು. ಅವರೊಂದಿಗೆ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ಶ್ರೀಪಾದರು. ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಅದಮಾರು ಮಠಾಧೀಶ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ರಾಜ್ಯ ಸಭಾ ಸದಸ್ಯೆ, ಇನ್ಫೋಸಿಸ್ ಫೌಂಡೆಶನ್ ಅಧ್ಯಕ್ಷೆ ಸುಧಾಮೂರ್ತಿ ಮತ್ತು ನಿವೃತ್ತ ಮುಖ್ಯ ನಾಯಾಧೀಶ ದಿನೇಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ನಂತರ ಬೆಣ್ಣೆ ಕಡೆಯುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂಧರ್ಭದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಇವರಿಗೆ “ಭಾರತ ಲಕ್ಷ್ಮೀ” ಎನ್ನುವ ಬಿರುದು ನೀಡಿ ಗೌರವಿಸಲಾಯಿತು. ರಾಜ್ಯಸಭಾ ಸದಸ್ಯೆ ಸುಧಾಮೂರ್ತಿಯವರಿಗೆ ಶ್ರೀ ಕೃಷ್ಣ ಗೀತಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ವೇದಿಕೆಯಲ್ಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಶಾಸಕ ಯಶಪಾಲ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ನಂತರ ಮಾತನಾಡಿದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ “ನಿರ್ಮಲಾ ಸೀತಾರಾಮನ್ ನಮ್ಮ ದೇಶದ ಭಾಗ್ಯ ದೇವತೆ, ಅವರು ದೇಶದ ಆರ್ಥಿಕ ವೃದ್ದಿಗೆ ಉತ್ತಮ ಬಜೆಟ್ ನೀಡಿದ್ದಾರೆ. ಹಾಗಾಗಿ ಅವರಿಗೆ ಭಾರತ ಲಕ್ಷ್ಮೀ ಎಂಬ ಬಿರುದು ನೀಡಿ ಗೌರವಿಸುತ್ತಿದ್ದೇವೆ. ಶ್ರೀ ಕೃಷ್ನನ ಅನುಗ್ರಹದಿಂದ ದೇಶದ ಆರ್ಥಿಕ ಸಂಕಷ್ಟಗಳೆಲ್ಲ ಕಳೆದು ಭಾರತ ಜಗತ್ತಿನ ನಂಬರ್ ಒನ್ ಆರ್ಥಿಕ ಶಕ್ತಿಯಾಗಲಿ ಎಂದು ಹರಸಿದರು.
ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಮಾತನಾಡಿ ” ದೇಶ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯವಿದೆ. ಭಾರ್ಗವ ರಾಮ 21 ಸಲ ಭೂಪ್ರದಕ್ಷಿಣೆ ಮಾಡಿ ದುಷ್ಟರ ಸಂಪತ್ತನ್ನು ಶಿಷ್ಟರ ಕೈಗೆ ಕೊಟ್ಟು ದೇಶ ಸುಭಿಕ್ಷೆ ಮಾಡಿದಂತೇ ನಿರ್ಮಲಾ ಸೀತಾರಾಮನ್ ಅವರಿಗೆ 21 ಸಲ ಬಜೆಟ್ ಮಂಡಿಸುವ ಅವಕಾಶ ಕೂಡಿ ಬರಲಿ ಎಂದು ಹಾರೈಸಿದರು. ದೇಶ ಆಧ್ಯಾತ್ಮಿಕ ಹಾಗೂ ಲೌಕಿಕವಾಗಿ ಸಮೃದ್ದಿ ಹೊಂದಲಿ ಎಂದರು. ದೇಶದ ಸುಭಿಕ್ಷೆಗೆ ದಿನವೂ ಕೃಷ್ನನ ಆರಾಧೆನೆ ಮಾಡಬೇಕು ಎಂದರು.
ಸಚಿವೆ ನಿರ್ಮಲಾ ಸೀತಾರಾಮನ್ ” ಶ್ರೀ ಕೃಷ್ನನ ಸಂದೇಶಗಳನ್ನು ಜಗತ್ತಿಗೆ ಪಸರಿಸಿದ ಕೀರ್ತಿ ಪುತ್ತಿಗೆ ಮಠದ ಶ್ರೀಗಳಿಗೆ ಸಲ್ಲಬೇಕು. ನಿತ್ಯ ಭಗವದ್ಗೀತೆ ಪಠಣ, ಕೋಟಿ ಭಗವದ್ಗೀತೆ ಬರಹ ಸಂಗ್ರಹ, ನಿತ್ಯ ಅನ್ನ ದಾಸೋಹ ಮುಂತಾದ ಕಾರ್ಯಕ್ರಮಗಳಿಂದ ಶ್ರೀ ಕೃಷ್ನ ಮಠ ಜಗತ್ ಪ್ರಸಿದ್ದವಾಗಿದೆ. ನಮ್ಮ ದೇಶ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಶ್ರೀ ಕೃಷ್ಣ ಭಗವಂತನು ಭಾರತ ದೇಶಕ್ಕೆ ಹಾಗೂ ಪ್ರಧಾನಿಯವರಿಗೆ ಹರಸಲಿ ಎಂದರು. ಪ್ರಧಾನಮಂತ್ರಿಗಳು ನಿಸ್ವಾರ್ಥವಾಗಿ ಈ ದೇಶದ ಸೇವೆ ಮಾಡುತ್ತದ್ದಾರೆ, ಭಾರತ ಮಾತೆಯನ್ನು ಎಲ್ಲರೂ ಹೃದಯದಲ್ಲಿ ಸ್ಥಾಪಿಸಿಕೊಂಡು ದೇಶಕ್ಕಾಗಿ ದೇವರಲ್ಲಿ ಪ್ರಾಥಿಸಿ ಎಂದರು. ನಾವು ಭಾರತೀಯರು ಎಲ್ಲರೂ ಒಟ್ಟಾಗಿ ದೇಶದ ಹಾಗೂ ಯುವ ಜನಾಂಗದ ಏಳಿಗೆಗೆ ಪ್ರಾಥಿಸಬೇಕು ಎಂದರು.