ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಆಯೋಜಿಸಿದ್ದ ವಿರೋಧ ಪಕ್ಷಗಳ ರಾಜಕೀಯ ಸಭೆಗೆ ಆಗಮಿಸಿದ ಪಕ್ಷಗಳ ನಾಯಕರಿಗೆ ನಿಯಮ ನಿಯಮಬಾಹಿರವಾಗಿ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡ ಸರ್ಕಾರದ ನಡೆಯನ್ನು ಖಂಡಿಸಿ, ಬಿಜೆಪಿ ಶಾಸಕರು ಸದನದಲ್ಲಿ ನಡೆಸಿದ ಪ್ರತಿಭಟನೆಯನ್ನು ನೆಪವಾಗಿಸಿ ಅಮಾನತುಗೊಳಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರಿ ಧೋರಣೆ ಬಯಲಾಗಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನರ್ಹಗೊಂಡಿರುವ ಸಂಸದ ರಾಹುಲ್ ಗಾಂಧಿ, ಜಾಮೀನಿನ ಮೇಲೆ ಹೊರಗೆ ಇರುವ ಲಾಲು ಪ್ರಸಾದ್ ಯಾದವ್ ಹಾಗೂ ತಮ್ಮ ರಾಜ್ಯಗಳಲ್ಲಿಯೇ ಮೂಲೆಗುಂಪಾಗಿರುವ ನಾಯಕರುಗಳಿಗೆ ಶಿಷ್ಟಾಚಾರದ ಹೆಸರಿನಲ್ಲಿ ಐಎಎಸ್ ಅಧಿಕಾರಿಗಳನ್ನು ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವ ಮೂಲಕ ಕಾನೂನು ಮೀರಿ ವರ್ತಿಸಿದ್ದು ಈ ನಡೆಯನ್ನು ಖಂಡಿಸಿದ ಶಾಸಕರನ್ನು ಅಮಾನತುಗೊಳಿಸುವ ಮೂಲಕ ಸಭಾಪತಿಗಳು ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಂತೆ ಸದನದ ಗೌರವವನ್ನು ಅಪವಿತ್ರಗೊಳಿಸಿದ್ದಾರೆ.
ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿರುವ ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ರಾಜಕೀಯ ಉದ್ದೇಶಕ್ಕಾಗಿ ಬಳಸುವ ಮೂಲಕ ಐಎಎಸ್ ಹುದ್ದೆಯ ಘನತೆಗೆ ಚ್ಯುತಿ ತಂದಿದೆ. ರಾಜ್ಯದ ಜನರ ತೆರಿಗೆಯ ಹಣವನ್ನು ತಮ್ಮ ರಾಜಕೀಯ ಉದ್ದೇಶಗಳಿಗೆ ಬಳಸುತ್ತಿದ್ದು ಈ ಮೂಲಕ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಹೈಕಮಾಂಡ್ ಸೋನಿಯಾ ಗಾಂಧಿಯ ಅವರನ್ನು ಮೆಚ್ಚಿಸಲು ಹೊರಟಂತಿದೆ.
ಅಧಿಕಾರದ ಮದದಲ್ಲಿರುವ ಕಾಂಗ್ರೆಸ್ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಸಂವಿಧಾನ ಬಾಹಿರವಾಗಿ ಶಾಸಕರನ್ನು ಅಮಾನತುಗೊಳಿಸಿ ತನ್ನ ತಪ್ಪನ್ನು ಮರೆಮಾಚುವ ವಿಫಲ ಪ್ರಯತ್ನಕ್ಕೆ ಕೈ ಹಾಕಿದ್ದು, ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ.