ಮಂಗಳೂರು: ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಮುಳುಗಿ ಓರ್ವ ಮೃತ್ಯು; ಮೂವರ ರಕ್ಷಣೆ

ಸುರತ್ಕಲ್: ಇಲ್ಲಿನ ಸಸಿಹಿತ್ಲು ಮೂಂಡಾ ಬೀಚ್ ಬಳಿ ಸಮುದ್ರಕ್ಕೆ ಇಳಿದಿದ್ದ 4 ಮಂದಿಯ ಪೈಕಿ ಓರ್ವ ಮೃತಪಟ್ಟು ಮೂವರನ್ನು ಸ್ಥಳೀಯರು ರಕ್ಷಿಸಿದ ಘಟನೆ ಸಸಿಹಿತ್ಲು ಎಂಬಲ್ಲಿ ರವಿವಾರ ಸಂಜೆ ವರದಿಯಾಗಿದೆ.

ಮೃತರನ್ನು ಪಡುಪಣಂಬೂರು ಕಜಕತೋಟ ನಿವಾಸಿ ದಿ. ಅನ್ವರ್ ಎಂಬವರ ಪುತ್ರ ಮುಹಮ್ಮದ್ ಸಮೀರ್ (23) ಎಂದು ತಿಳಿದು ಬಂದಿದೆ.

ಪಡುಪಣಂಬೂರು ಕಜಕತೋಟ ನಿವಾಸಿ ಅಬೂಬಕರ್ ಎಂಬವರ ಪುತ್ರ ಐಮಾನ್ (23), ಕಜಕತೋಟ ನಿವಾಸಿ ರಯೀಸ್ (22), ಹಳೆಯಂಗಡಿ ಬೊಳ್ಳೂರು ನಿವಾಸಿ ಹನೀಫ್ ಎಂಬವರ ಪುತ್ರ ಫಾಝಿಲ್ ಎಂಬವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಒಂದೇ ಕುಟುಂಬದ ಆರು ಮಂದಿ ಸಹೋದರರ ಮಕ್ಕಳು ರವಿವಾರ ಸಂಜೆ ಸಸಿಹಿತ್ಲು ಮೂಂಡಾ ಬೀಚ್‌ ಗೆ ವಿಹಾರಕ್ಕೆಂದು ತೆರಳಿದ್ದರು. ಈ ವೇಳೆ ಅವರು ನೀರಿನ‌ಲ್ಲಿ ಆಡುತ್ತಿದ್ದ ಸಂದರ್ಭ ಬೃಹತ್ ಅಲೆಯ ಸೆಳೆತಕ್ಕೆ‌ ಸಿಲುಕಿ ಮುಹಮ್ಮದ್ ಸಮೀರ್,‌ ಐಮಾನ್, ಫಾಝಿಲ್ ಸಮುದ್ರ ಪಾಲಾಗುತ್ತಿದ್ದರು ಎನ್ನಲಾಗಿದೆ.

ಈ ವೇಳೆ ದಡದಲ್ಲಿದ್ದವರು ಬೊಬ್ಬೆ‌ ಹಾಕಿದ್ದು, ಬೊಬ್ಬೆ‌ಕೇಳಿ ಸ್ಥಳಕ್ಕೆ ಬಂದ ಸ್ಥಳೀಯ ಮೀನುಗಾರ ನಿವಾಸಿಗಳು ಮೂವರನ್ನೂ ರಕ್ಷಿಸಿ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ. ಈ ಪೈಕಿ, ಐಮಾಮ್ ಮತ್ತು ಫಾಝಿಲ್ ಅಪಾಯದಿಂದ ಪಾರಾಗಿದ್ದು, ಮುಹಮ್ಮದ್ ಸಮೀರ್ ಮೃತಪಟ್ಟರೆಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.