ಗಾಂಧಿನಗರ: ಪ್ರಪಂಚದ ಸುಮಾರು 90% ವಜ್ರಗಳನ್ನು ಕತ್ತರಿಸಿ ಅವುಗಳಿಗೆ ಆಕಾರ ನೀಡುವ ಗುಜರಾತಿನ ಸೂರತ್ ನಗರವು ಹೊಸ ದಾಖಲೆಯನ್ನು ಬರೆದಿದೆ. ವಿಶ್ವದ ಅತಿದೊಡ್ಡ ಕಚೇರಿಯೆಂದು ಹೆಗ್ಗಳಿಕೆ ಹೊಂದಿರುವ ಸೂರತ್ ಡೈಮಂಡ್ ಬೋರ್ಸ್ ಕಟ್ಟಡ ಅಮೇರಿಕಾದ ಪೆಂಟಗನ್ ಅನ್ನು ಹಿಂದಿಕ್ಕಿದೆ.
ವಜ್ರದ ಬೃಹತ್ ಉದ್ಯಮವನ್ನು ಇನ್ನು ಮುಂದೆ ಸೂರತ್ ಡೈಮಂಡ್ ಬೋರ್ಸ್‌ನಲ್ಲಿ ಇರಿಸಲಾಗುವುದು. ಇದರಲ್ಲಿ ಕಟ್ಟರ್‌ಗಳು, ಪಾಲಿಷರ್‌ಗಳು ಮತ್ತು ವ್ಯಾಪಾರಿಗಳು ಸೇರಿದಂತೆ 65,000 ಕ್ಕೂ ಹೆಚ್ಚು ವಜ್ರ ವೃತ್ತಿಪರರು ಕೆಲಸ ಮಾಡಲಿದ್ದಾರೆ.
The Pentagon was the world's largest office building for 80 years. This new building just took the title. pic.twitter.com/3tTqWlmz6q
— CNN (@CNN) July 18, 2023
ಕಟ್ಟಡವು ಒಂಬತ್ತು ಆಯತಾಕಾರದ ರಚನೆಗಳ ಸರಣಿಯನ್ನು ಹೊಂದಿದೆ, ಇದು ಕೇಂದ್ರ-ಬೆನ್ನುಮೂಳೆಯಂತಹ ರಚನೆ ಮೂಲಕ ಪರಸ್ಪರ ಸಂಪರ್ಕ ಹೊಂದಿದೆ. ಇದು 15 ಅಂತಸ್ತಿನ ಸಂಕೀರ್ಣವಾಗಿದ್ದು, 35 ಎಕರೆಗೂ ಹೆಚ್ಚು ಭೂಮಿಯಲ್ಲಿ ಹರಡಿದೆ.
ಸೂರತ್ ಡೈಮಂಡ್ ಬೋರ್ಸ್‌ನ ವಾಸ್ತುಶಿಲ್ಪಿಗಳು ಸಿಎನ್‌ಎನ್ ಸುದ್ದಿವಾಹಿನಿಗೆ ನೀಡಿದ ಮಾಹಿತಿ ಪ್ರಕಾರ ಈ ಕಟ್ಟಡವು 7.1 ಮಿಲಿಯನ್ ಚದರ ಅಡಿಗಳಷ್ಟು ನೆಲದ ಜಾಗವನ್ನು ಒಳಗೊಂಡಿದೆ. ಪೆಂಟಗನ್ 6.5 ಮಿಲಿಯನ್ ಚದರ ಅಡಿಗಳಷ್ಟು ನೆಲದ ಜಾಗವನ್ನು ಒಳಗೊಂಡಿದೆ. ಅದರಿಂದಾಗಿ ಸೂರತ್ ಡೈಮಂಡ್ ಬೋರ್ಸ್ ವಿಶ್ವದ ಅತಿ ದೊಡ್ಡ ಕಚೇರಿಯೆನ್ನುವ ಖ್ಯಾತಿಗೆ ಪಾತ್ರವಾಗಿದೆ.
ಕಟ್ಟಡದ ಕಾಮಗಾರಿಯು 2019 ರಲ್ಲಿ ಪ್ರಾರಂಭವಾಯಿತು. ಕೋವಿಡ್ -19 ಕಾರಣ ಕಾಮಗಾರಿ ವಿಳಂಬವಾದರೂ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.