ಲಕ್ನೋ: ಕೇಂದ್ರ ಲೋಕಸೇವಾ ಆಯೋಗ (UPSC) 2022 ರಲ್ಲಿ ನಡೆದ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದೆ. ಉತ್ತರ ಪ್ರದೇಶದ ಸೂರಜ್ ತಿವಾರಿ ಯಶಸ್ವಿಯಾಗಿ ತೇರ್ಗಡೆಯಾದ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ. ಮೈನ್‌ಪುರಿಯ ಸೂರಜ್ ತಿವಾರಿ 2017 ರಲ್ಲಿ ಗಾಜಿಯಾಬಾದ್‌ನ ದಾದ್ರಿಯಲ್ಲಿ ನಡೆದ ರೈಲು ಅಪಘಾತದಲ್ಲಿ ತನ್ನ ಎರಡೂ ಕಾಲುಗಳು ಹಾಗೂ ಬಲಗೈ ಮತ್ತು ಎಡಗೈಯ ಎರಡು ಬೆರಳುಗಳನ್ನು ಕಳೆದುಕೊಂಡಿದ್ದಾರೆ. ಆದರೂ ಎದೆಗುಂದದ ಅವರು ಯು.ಪಿ.ಎಸ್.ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಿ ಇತರರಿಗೆ ಮಾದರಿಯಾಗಿದ್ದಾರೆ.
ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಸೂರಜ್ ತಿವಾರಿ ಪೋಷಕರು ಅವರನ್ನು “ಧೈರ್ಯಶಾಲಿ” ಎಂದು ಕರೆದಿದ್ದಾರೆ “ಇಂದು ನಾನು ತುಂಬಾ ಸಂತೋಷವಾಗಿದ್ದೇನೆ, ನನ್ನ ಮಗ ನನಗೆ ಹೆಮ್ಮೆ ತಂದಿದ್ದಾನೆ. ಅವನು ತುಂಬಾ ಧೈರ್ಯಶಾಲಿ. ಯಶಸ್ವಿಯಾಗಲು ಅವನ ಮೂರು ಬೆರಳುಗಳು ಸಾಕು” ಎಂದು ಸೂರಜ್ ತಿವಾರಿ ತಂದೆ ರಮೇಶ್ ಕುಮಾರ್ ತಿವಾರಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ಹೇಳಿದೆ.
ಸೂರಜ್ ತಾಯಿ ಆಶಾ ದೇವಿ ತಿವಾರಿ, “ನನ್ನ ಮಗ ತುಂಬಾ ಧೈರ್ಯಶಾಲಿ. ಸೂರಜ್ ಎಂದಿಗೂ ತನ್ನ ಜೀವನದಲ್ಲಿ ಎದೆಗುಂದಲಿಲ್ಲ ಮತ್ತು ಯಶಸ್ಸಿಗಾಗಿ ಕಷ್ಟಪಟ್ಟು ಕೆಲಸ ಮಾಡಿದ್ದಾನೆ. ಅವನು ಯಾವಾಗಲೂ ತನ್ನ ಕಿರಿಯ ಸಹೋದರರಿಗೆ ಕಷ್ಟಪಟ್ಟು ಕೆಲಸ ಮಾಡಲು ಹೇಳುತ್ತಾನೆ” ಎಂದಿದ್ದಾರೆ.
ಮಾಹಿತಿಗಳ ಪ್ರಕಾರ ಸೂರಜ್ ತನನ್ ಮೊದಲನೇ ಪ್ರಯತ್ನದಲ್ಲೇ 917 ನೇ ಶ್ರೇಯಾಂಕದೊದಿಗೆ ತೇರ್ಗಡೆ ಹೊಂದಿದ್ದಾರೆ.
ಐದನೇ ವಯಸ್ಸಿನಲ್ಲಿ ಬಸ್ ಅಪಘಾತದಲ್ಲಿ ತನ್ನ ಬಲಗೈ ಕಳೆದುಕೊಂಡ ತಿರುವನಂತಪುರದ ಅಖಿಲಾ ಬಿ ಎಸ್ ಕೂಡಾ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.