ನವದೆಹಲಿ: ತನ್ನ ತಂದೆಯನ್ನು ಕಳೆದುಕೊಂಡಾಗ ಸುಪ್ರಿತಿ ಕಚ್ಚಪ್ ಕೇವಲ ಶಿಶುವಾಗಿದ್ದರು. ತಂದೆ ರಾಮಸೇವಕ್ ಓರಾನ್, ತಾಯಿ ಬಲ್ಮತಿ ದೇವಿ ಮತ್ತು ಅವರ ಐದು ಮಕ್ಕಳು ಝಾರ್ಖಂಡ್ ನ ಬುರ್ಹು ಗ್ರಾಮದ ನಿವಾಸಿಗಳಾಗಿದ್ದರು. ಗ್ರಾಮದ ವೈದ್ಯಕೀಯ ವೈದ್ಯರಾಗಿದ್ದ ಓರಾನ್ 2003 ಡಿಸೆಂಬರ್ ರಾತ್ರಿಯಂದು ಇತರ ನಾಲ್ಕು ಗ್ರಾಮಸ್ಥರೊಂದಿಗೆ ಹತ್ತಿರದ ಹಳ್ಳಿಯ ರೋಗಿಯ ಮನೆಗೆ ಹೋಗಿದ್ದರು. ಆದರೆ ಅವರು ತಿರುಗಿ ವಾಪಾಸು ಮನೆಗೆ ಬರಲೇ ಇಲ್ಲ. ಓರಾನ್ ಮತ್ತು ಇತರ ಗ್ರಾಮಸ್ಥರು ನಕ್ಸಲ್ ದಾಳಿಗೆ ಬಲಿಯಾಗಿ ಶವವಾಗಿ ಪತ್ತೆಯಾಗಿದ್ದರು. ಅವರ ದೇಹಗಳನ್ನು ಮರಕ್ಕೆ ಕಟ್ಟಲಾಗಿತ್ತು ಮತ್ತು ದೇಹದೊಳಗೆ ಗುಂಡು ಹಾರಿಸಿದ ಚಿಹ್ನೆಗಳಿದ್ದವು.
ಬಾಲ್ಯದಲ್ಲೇ ತನ್ನ ತಂದೆಯನ್ನು ನಕ್ಸಲ್ ದಾಳಿಯಲ್ಲಿ ಕಳೆದುಕೊಂಡರೂ ಇವತ್ತು ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಗುರುವಾರ ಬೆಳಗ್ಗೆ ಪಂಚಕುಲದಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಬಾಲಕಿಯರ 3000 ಮೀ ರೇಸ್ ನಲ್ಲಿ 19 ವರ್ಷದ ಸುಪ್ರಿತಿ 9 ನಿಮಿಷ 46.14 ಸೆಕೆಂಡ್‌ಗಳಲ್ಲಿ( ಹಿಂದಿನ ದಾಖಲೆ 9 ನಿಮಿಷ 50.54 ಸೆಕೆಂಡ್) ಗುರಿ ತಲುಪುವ ಮೂಲಕ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ನ್ಯಾಶನಲ್ ಯೂತ್ ನಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿ ಚಿನ್ನ ಗೆದ್ದಿದ್ದಾರೆ. ಮಗಳ ಸಾಧನೆಯಿಂದ ತಾಯಿ ಬಲ್ಮತಿ ದೇವಿ ಅತ್ಯಂತ ಆನಂದ ತುಂದಿಲರಾಗಿದ್ದಾರೆ.
“ನಕ್ಸಲರು ಆಕೆಯ ತಂದೆಯನ್ನು ಕೊಂದಾಗ ಸುಪ್ರಿತಿ ಇನ್ನೂ ನಡೆಯುತ್ತಲೂ ಇರಲಿಲ್ಲ. ಇಷ್ಟು ವರ್ಷ ನನ್ನ ಮಕ್ಕಳನ್ನು ಪೋಷಿಸಲು ನಾನು ಹೆಣಗಾಡಿದ್ದೇನೆ. ಅವಳು ಓಟವನ್ನು ಇಷ್ಟಪಡುತ್ತಾಳೆ ಮತ್ತು ಅವಳ ತಂದೆ ಇಂದು ಬದುಕಿದ್ದರೆ, ಅವರು ತನ್ನ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತಿದ್ದರು ಎಂದು ಯಾವಾಗಲೂ ಆಕೆ ಹೇಳುತ್ತಾಳೆ. ಅವರು ಅವಳನ್ನು ನೋಡುತ್ತಿದ್ದಾನೆಂದು ನಮಗೆ ತಿಳಿದಿದೆ. ಅವಳು ಮನೆಗೆ ಹಿಂದಿರುಗಿದಾಗ, ನಾವು ಅವಳ ಪದಕವನ್ನು ಬುರ್ಹು ಗ್ರಾಮದ ನಮ್ಮ ಮನೆಯಲ್ಲಿ ಇಡುತ್ತೇವೆ” ಎಂದು ಸುಪ್ರಿತಿ ತಾಯಿ ಬಲ್ಮತಿ ದೇವಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ರಾಷ್ಟ್ರೀಯ 3000 ಮೀಟರ್ ಸ್ಟೀಪಲ್ ಚೇಸ್ ದಾಖಲೆ ಹೊಂದಿರುವ ಅವಿನಾಶ್ ಸೇಬಲ್ ತನಗೆ ಸ್ಪೂರ್ತಿ ಎನ್ನುವ ಸುಪ್ರಿತಿ, “ಅವರು ಕೂಡ ಬಡ ಕುಟುಂಬದಿಂದ ಬಂದವರು ಮತ್ತು ನನಗೆ ಮಾದರಿಯಾಗಿದ್ದಾರೆ. ನನಗೆ ಪ್ರೇರಣೆ ಬೇಕಾದಾಗಲೆಲ್ಲಾ, ನಾನು ಅವರ ಸ್ಪರ್ಧೆಯ ವೀಡಿಯೊಗಳನ್ನು ನೋಡುತ್ತೇನೆ. ನಾನು ಭಾರತಕ್ಕಾಗಿ ಒಂದು ದಿನ ಪದಕಗಳನ್ನು ಗೆಲ್ಲಬಲ್ಲೆ ಎಂದು ಆಶಾವಾದಿಯಾಗಿದ್ದೇನೆ. ನನಗೆ ನನ್ನ ತಂದೆಯ ನೆನಪಿಲ್ಲ, ಆದರೆ ನಾನು ಈ ಪದಕವನ್ನು ಅವರಿಗೆ ಅರ್ಪಿಸಲು ಬಯಸುತ್ತೇನೆ” ಎನ್ನುತ್ತಾರೆ.












