ಬೆಂಗಳೂರು: ದರ್ಶನ್ ವಿರುದ್ಧದ ರೇಣುಕಾ ಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ನಟ ದರ್ಶನ್ ಅವರಿಗೆ ಜಾಮೀನು ನಿರಾಕರಿಸಿದೆ.
ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳ ಪೀಠ, ಪ್ರಕರಣದ ವಿಚಾರಣೆಯನ್ನು ವೇಗವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ. “ಒಂದು ವರ್ಷದೊಳಗೆ ವಿಚಾರಣೆ ಪೂರ್ಣಗೊಳಿಸಬೇಕು. ನಿಗದಿತ ಅವಧಿಯೊಳಗೆ ಟ್ರಯಲ್ ಮುಗಿಯದಿದ್ದರೆ ಜಾಮೀನು ಪರಿಗಣಿಸಲಾಗುತ್ತದೆ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದಲ್ಲಿ ಒಟ್ಟು 272 ಸಾಕ್ಷಿಗಳಿದ್ದು, ಕಳೆದ ಏಳು ತಿಂಗಳಲ್ಲಿ ಕೇವಲ 10 ಮಂದಿಯ ವಿಚಾರಣೆ ಮಾತ್ರ ನಡೆದಿರುವುದನ್ನು ಗಮನಿಸಿದ ನ್ಯಾಯಾಲಯ, ವಿಚಾರಣೆಯ ನಿಧಾನಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಇದೇ ರೀತಿ ಮುಂದುವರಿದರೆ ಪ್ರಕರಣ ಮುಕ್ತಾಯಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟ ಪೀಠ, ಇನ್ನು ಮುಂದೆ ಪ್ರತಿದಿನವೂ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದೆ.
ಇದೇ ವೇಳೆ ಸಾಕ್ಷಿಗಳನ್ನು ಪುನಃ ಪುನಃ ವಿಚಾರಣೆ ನಡೆಸಬಾರದು ಎಂದು ಕೂಡ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಹಾಗೆಯೇ 2027ರ ಮೇ 15ರೊಳಗೆ ಪ್ರಕರಣದ ಸಂಪೂರ್ಣ ವಿಚಾರಣೆ ಮುಗಿಸಬೇಕೆಂದು ಆದೇಶಿಸಿದೆ.
ಈ ತೀರ್ಪಿನಿಂದ ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್ ಅವರಿಗೆ ಭಾರಿ ಹಿನ್ನಡೆ ಉಂಟಾಗಿದೆ. ಸದ್ಯ ಪರಪ್ಪನ ಸೆಂಟ್ರಲ್ ಜೈಲ್ ನಲ್ಲಿ ಇರುವ ದರ್ಶನ್ ಇನ್ನೂ ಕೆಲವು ಕಾಲ ಜೈಲಿನಲ್ಲೇ ಉಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

















