ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ ನಿಧನ

ನವದೆಹಲಿ: ಖ್ಯಾತ ಸಾಂವಿಧಾನಿಕ ನ್ಯಾಯಶಾಸ್ತ್ರಜ್ಞ ಮತ್ತು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್ ನಾರಿಮನ್ (95) ಅವರು ಬುಧವಾರ ನವದೆಹಲಿಯಲ್ಲಿ ನಿಧನರಾಗಿದ್ದಾರೆ.

ನವೆಂಬರ್ 1950 ರಲ್ಲಿ, ನಾರಿಮನ್ ಅವರು ಬಾಂಬೆ ಹೈಕೋರ್ಟ್‌ನ ವಕೀಲರಾದರು. ನಂತರ 1961 ರಲ್ಲಿ ಹಿರಿಯ ವಕೀಲರ ಹುದ್ದೆಯನ್ನು ಪಡೆದರು. ಆರಂಭದಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ಕೆಲಸ ಮಾಡಿದ ಅವರು, 1972 ರಲ್ಲಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಅಭ್ಯಾಸ ಮಾಡಲು ನವದೆಹಲಿಗೆ ಸ್ಥಳಾಂತರಗೊಂಡರು. ಮೇ 1972 ರಿಂದ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದರು. 1991 ರಿಂದ 2010 ರವರೆಗೆ ಬಾರ್ ಅಸೋಸಿಯೇಶನ್ ಆಫ್ ಇಂಡಿಯಾದ ಅಧ್ಯಕ್ಷರೂ ಆಗಿದ್ದರು. 70 ವರ್ಷಗಳ ಕಾನೂನು ಜೀವನದಲ್ಲಿ ಹಲವರು ಪ್ರಕರಣಗಳನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಜೂನ್ 1975 ರಲ್ಲಿ, ಇಂದಿರಾ ಗಾಂಧಿ ಸರ್ಕಾರದಿಂದ ತುರ್ತು ಪರಿಸ್ಥಿತಿ ಘೋಷಣೆಗೆ ವಿರೋಧವಾಗಿ ನಾರಿಮನ್ ಅವರು ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದರು.

ನಾರಿಮನ್ ಅವರಿಗೆ ಜನವರಿ 1991 ರಲ್ಲಿ ಪದ್ಮಭೂಷಣವನ್ನು ಮತ್ತು 2007 ರಲ್ಲಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು.