ದೂರಿಗಾಗಿ ಕಾಯದೆ ದ್ವೇಷ ಭಾಷಣದ ಅಪರಾಧಗಳ ವಿರುದ್ಧ ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಿ: ಸುಪ್ರೀಂ ಕೋರ್ಟ್

ನವದೆಹಲಿ: “ವಿವಿಧ ಧಾರ್ಮಿಕ ಸಮುದಾಯಗಳು ಸೌಹಾರ್ದತೆಯಿಂದ ಬದುಕಲು ಸಾಧ್ಯವಾಗದ ಹೊರತು ಭ್ರಾತೃತ್ವ ಇರಲು ಸಾಧ್ಯವಿಲ್ಲ” ಎಂದು ಗಮನಿಸಿದ ಸುಪ್ರೀಂ ಕೋರ್ಟ್ ಶುಕ್ರವಾರ ದೇಶದಲ್ಲಿ ದ್ವೇಷದ ಭಾಷಣಗಳನ್ನು ತಡೆಯುವ ಮನವಿಯಲ್ಲಿ ಮಧ್ಯಂತರ ನಿರ್ದೇಶನಗಳನ್ನು ನೀಡಿದೆ.

ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಪೀಠವು ದೆಹಲಿ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಸರ್ಕಾರಗಳಿಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ನಡೆದ ದ್ವೇಷ ಭಾಷಣ ಅಪರಾಧಗಳ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದೆ.

ಮುಖ್ಯವಾಗಿ, ಯಾವುದೇ ದೂರಿಗೆ ಕಾಯದೆ, ಯಾವುದೇ ದ್ವೇಷ ಭಾಷಣ ಅಪರಾಧದ ವಿರುದ್ಧ ಈ ಸರ್ಕಾರಗಳು ಸ್ವಯಂಪ್ರೇರಿತ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ನಿರ್ದೇಶಿಸಿದೆ. ಪ್ರಕರಣಗಳನ್ನು ಸ್ವಯಂಪ್ರೇರಿತವಾಗಿ ದಾಖಲಿಸಬೇಕು ಮತ್ತು ಅಪರಾಧಿಗಳ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಭಾಷಣ ಮಾಡಿದ ವ್ಯಕ್ತಿ ಯಾವ ಧರ್ಮದವರೇ ಆಗಿದ್ದರೂ ಕ್ರಮ ಕೈಗೊಳ್ಳಬೇಕು. ನಿರ್ದೇಶನದ ಪ್ರಕಾರ ಕಾರ್ಯನಿರ್ವಹಿಸಲು ಯಾವುದೇ ಹಿಂಜರಿಕೆಯನ್ನು ನ್ಯಾಯಾಲಯದ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.

ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಪೀಠವು “ಭಾರತದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುವ ಮತ್ತು ಭಯಭೀತಗೊಳಿಸುವ ಬೆದರಿಕೆಯನ್ನು” ತಡೆಯಲು ತುರ್ತು ಮಧ್ಯಪ್ರವೇಶವನ್ನು ಕೋರುವ ಅರ್ಜಿಯ ವಿಚಾರಣೆ ನಡೆಸುತ್ತಿದೆ. ದ್ವೇಷದ ಅಪರಾಧಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಪೀಠ, ಅರ್ಜಿಯ ಕುರಿತು ನೋಟಿಸ್ ಜಾರಿ ಮಾಡಿದೆ. ಅರ್ಜಿದಾರರ ದೂರು “ದೇಶದಲ್ಲಿ ಚಾಲ್ತಿಯಲ್ಲಿರುವ ದ್ವೇಷದ ವಾತಾವರಣ” ಮತ್ತು ಅಧಿಕಾರಿಗಳ ಸಂಪೂರ್ಣ ನಿಷ್ಕ್ರಿಯತೆಗೆ ಸಂಬಂಧಿಸಿದೆ ಎಂದು ಪೀಠ ಹೇಳಿದೆ ಎಂದು ಲೈವ್ ಲಾ ವರದಿ ಮಾಡಿದೆ.