NCERT ವಿವಾದಾತ್ಮಕ ಪುಸ್ತಕದ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡ ಸುಪ್ರೀಂ ಕೋರ್ಟ್.!

ನವದೆಹಲಿ: ನ್ಯಾಯಾಂಗ ಭ್ರಷ್ಟಾಚಾರ ಕುರಿತು ಉಲ್ಲೇಖಿಸಿದ್ದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಯ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವನ್ನು ಸುಪ್ರೀಂ ಕೋರ್ಟ್‌ ಗುರುವಾರ (ಫೆ.26) ನಿಷೇಧಿಸಿದೆ.

ಇದು ಆಳವಾಗಿ ಸಂಚಿನ ಫಲವಾಗಿದ್ದು, ಇದಕ್ಕೆ ಹೊಣೆಗಾರರಾದವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು ಎಂದು ಸಿಜೆಐ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್‌. ಎಂ. ಪಂಚೋಲಿ ಅವರಿದ್ದ ನ್ಯಾಯಪೀಠ ಆದೇಶಿಸಿದೆ.

ಈ ವಿಚಾರದ ಬಗ್ಗೆ ಆಳವಾದ ತನಿಖೆ ಬೇಕು. ಯಾರು ಹೊಣೆಗಾರರು ಎಂಬುದನ್ನು ಪತ್ತೆಹಚ್ಚಬೇಕು. ಅವರ ತಲೆಗಳು ಉರುಳಬೇಕು, ಅಲ್ಲಿಯವರೆಗೆ ನಾವು ಪ್ರಕರಣ ಮುಕ್ತಾಯಗೊಳಿಸುವುದಿಲ್ಲ ಎಂದು ಸಿಜೆಐ ಕಾಂತ್ ಎಚ್ಚರಿಕೆ ನೀಡಿದರು.

ಈ ರೀತಿಯ ವರ್ತನೆಯು ಸಾಂಸ್ಥಿಕ ಅಧಿಕಾರವನ್ನು ದುರ್ಬಲಗೊಳಿಸಲು ಮತ್ತು ನ್ಯಾಯಾಂಗದ ಘನತೆಯನ್ನು ಕುಗ್ಗಿಸಲು ನಡೆಸಿದ ಉದ್ದೇಶಪೂರ್ವಕ ಯತ್ನದಂತೆ ತೋರುತ್ತಿದೆ ಎಂದು ನ್ಯಾಯಾಲಯ ಕಿಡಿಕಾರಿದೆ.

ಅಂತೆಯೇ ಎನ್‌ಸಿಇಆರ್‌ಟಿ ನಿರ್ದೇಶಕ ಡಾ. ದಿನೇಶ್ ಪ್ರಸಾದ್ ಸಕ್ಲಾನಿ ಅವರಿಗೆ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಲಾಗಿದೆ. ಮುದ್ರಿತ ಹಾಗೂ ಡಿಜಿಟಲ್ ಪ್ರತಿಗಳನ್ನು ಸಾರ್ವಜನಿಕವಾಗಿ ದೊರೆಯದಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿರುವ ನ್ಯಾಯಾಲಯ ವಿವಾದಿತ ಅಧ್ಯಾಯ ರಚಿಸಿದ ರಾಷ್ಟ್ರೀಯ ಪಠ್ಯಕ್ರಮ ಮಂಡಳಿಯ ಸದಸ್ಯರ ವಿವರಗಳು ಹಾಗೂ ಅಂದು ನಡೆದಿದ್ದ ಸಭೆಯ ಟಿಪ್ಪಣಿಗಳನ್ನು ಸಲ್ಲಿಸುವಂತೆ ತಾಕೀತು ಮಾಡಿದೆ.

ಈ ಅಧ್ಯಾಯವು ನ್ಯಾಯಾಂಗದ ವೈಭವಶಾಲಿ ಇತಿಹಾಸ, ಮೂಲ ಸಂರಚನಾ ಸಿದ್ಧಾಂತವನ್ನು ಕಾಪಾಡಿದ ಪಾತ್ರ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಉಳಿಸುವಲ್ಲಿ ವಹಿಸಿದ ಮಹತ್ವವನ್ನು ಕಡೆಗಣಿಸಿದೆ. ಪದಪ್ರಯೋಗವು ಸಾಮಾನ್ಯ ತಪ್ಪಿನಂತೆ ಕಾಣುವುದಿಲ್ಲ ಎಂದು ಪೀಠ ಹೇಳಿದೆ. ಇದು ನ್ಯಾಯಾಂಗದ ಗೌರವ ಮತ್ತು ಸಂಸ್ಥೆಯ ಅಧಿಕಾರವನ್ನು ಕುಗ್ಗಿಸುವ ಯೋಜಿತ ಕ್ರಮವಾಗಿರಬಹುದು ಎಂದು ನ್ಯಾಯಪೀಠ ಹೇಳಿದೆ.

ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಬೇಷರತ್‌ ಕ್ಷಮೆಯಾಚಿಸಿದರು. ಆದರೆ ಸಿಜೆಐ, ಅವರು ಗುಂಡು ಹಾರಿಸಿದ್ದಾರೆ, ನ್ಯಾಯಾಂಗ ರಕ್ತ ಸುರಿಸುತ್ತಿದೆ ಎಂದರು. ಸಮಂಜಸ ಟೀಕೆಯನ್ನು ಬೇಡ ಎನ್ನುವುದಿಲ್ಲ ಆದರೆ ವಿದ್ಯಾರ್ಥಿಗಳಿಗೆ ಪಕ್ಷಪಾತದ ಮತ್ತು ಪೂರ್ವಾಗ್ರಹದ ಚಿತ್ರಣ ನೀಡುವುದು ಶಿಕ್ಷಣದ ಅಖಂಡತೆಗೆ ಮಾರಕ ಎಂದು ನ್ಯಾಯಾಲಯ ಹೇಳಿತು.

ತಾನು ನೀಡಿರುವ ಆದೇಶದ ಅನುಪಾಲನಾ ವರದಿಗಳು ಬಂದ ಬಳಿಕ ತಪ್ಪಿತಸ್ಥರನ್ನು ಗುರುತಿಸಲು ಸಮಿತಿ ರಚಿಸಲಾಗುವುದು ಎಂದು ನ್ಯಾಯಾಲಯ ನುಡಿಯಿತು. ವಿಚಾರಣೆ ನಾಲ್ಕು ವಾರಗಳ ಬಳಿಕ ಪ್ರಕರಣವನ್ನು ನ್ಯಾಯಾಲಯ ಮತ್ತೆ ಕೈಗೆತ್ತಿಕೊಳ್ಳಲಿದೆ ಎಂದು ಹೇಳಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.