ಶ್ವಾನ ಪ್ರಿಯರಿಗೆ ಗುಡ್ ನ್ಯೂಸ್: ಬೀದಿ ನಾಯಿಗಳ ಪರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಬೀದಿ ನಾಯಿಗಳನ್ನು ಆಶ್ರಯ ತಾಣದಲ್ಲಿ ಬಂಧಿಸದೇ ಕೇವಲ ಸಂತಾನ ಶಕ್ತಿಹರಣ ಚಿಕಿತ್ಸೆ ನೀಡಿ ಬಿಡುಗಡೆ ಮಾಡುವ ಮೂಲಕ ಶ್ವಾನ ಪ್ರಿಯರಿಗೆ ಸುಪ್ರೀಂಕೋರ್ಟ್​ ಗುಡ್​ ನ್ಯೂಸ್​ ನೀಡಿದೆ.

ಆದರೆ ರೇಬಿಸ್​ ನಾಯಿಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಕೋರ್ಟ್​ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ. ಈ ಹಿಂದಿನ ಆದೇಶವನ್ನು ಪರಿಶೀಲಿಸಿ, ಬೀದಿ ನಾಯಿಗಳ ವಿಷಯದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಅನೇಕ ವಿಷಯಗಳನ್ನು ನ್ಯಾಯಾಲಯ ಪ್ರಸ್ತಾಪಿಸಿದೆ.

ಈ ಹಿಂದೆ ಆಗಸ್ಟ್ 11, 2025ರಂದು, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, ದೆಹಲಿ-NCR ಪ್ರದೇಶದ ಎಲ್ಲ ಬೀದಿ ನಾಯಿಗಳನ್ನು ಎಂಟು ವಾರಗಳ ಒಳಗೆ ಶೆಲ್ಟರ್‌ಗಳಿಗೆ ಸ್ಥಳಾಂತರಿಸಲು ಮತ್ತು ಅವುಗಳನ್ನು ಮತ್ತೆ ಸಾರ್ವಜನಿಕ ಸ್ಥಳಗಳಿಗೆ ಬಿಡದಂತೆ ಸ್ಥಳೀಯ ಆಡಳಿತಕ್ಕೆ ನಿರ್ದೇಶನ ನೀಡಿತು. ಈ ಆದೇಶವು ಬೀದಿ ನಾಯಿಗಳ ದಾಳಿಗಳಿಂದ, ವಿಶೇಷವಾಗಿ ಮಕ್ಕಳ ಮೇಲಿನ ದಾಳಿಗಳಿಂದ ಉಂಟಾದ ರೇಬೀಸ್ ಸಾವುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿತ್ತು. ಈ ತೀರ್ಪು ಪ್ರಾಣಿ ಕಾಳಜಿ ಸಂಘಗಳು, ಕಾರ್ಯಕರ್ತರು ಮತ್ತು ಸಾರ್ವಜನಿಕರಿಂದ ತೀವ್ರ ಟೀಕೆಗೆ ಒಳಗಾಯಿತು, ಇದು “ಅವೈಜ್ಞಾನಿಕ” ಮತ್ತು “ಅಮಾನವೀಯ” ಎಂದು ಕರೆಯಲ್ಪಟ್ಟಿತು. 2025, ಆಗಸ್ಟ್ 13ರಂದು, ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಈ ವಿಷಯವನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರಿಂದ ಕೂಡಿದ ಮೂವರು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿದರು.

ಇಂದು ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರಿಂದ ಕೂಡಿದ ತ್ರಿಸದಸ್ಯ ಪೀಠವು ಈ ಹಿಂದಿನ ಆದೇಶವನ್ನು ಮಾರ್ಪಡಿಸಿ, ದೆಹಲಿ-NCR ಪ್ರದೇಶದ ಎಲ್ಲ ಬೀದಿ ನಾಯಿಗಳನ್ನು ಶೆಲ್ಟರ್‌ಗಳಿಗೆ ಸ್ಥಳಾಂತರಿಸಿ, ಸಂತಾನ ಶಕ್ತಿ ಹರಣ ಚಿಕಿತ್ಸೆ ನೀಡಿದ ಬಳಿಕ ಮತ್ತೆ ಸಾರ್ವಜನಿಕ ಸ್ಥಳಗಳಿಗೆ ಬಿಡುವಂತೆ ನಿರ್ದೇಶಿಸಿದೆ. ಅಲ್ಲದೆ, ಕೆಲವೊಂದಿಷ್ಟು ವಿಚಾರಗಳನ್ನು ಸಹ ನ್ಯಾಯಾಲಯ ಇದೇ ಸಮಯದಲ್ಲಿ ಪ್ರಸ್ತಾಪ ಮಾಡಿದೆ.

ಇಂದು ಪ್ರಕಟವಾಗಿರುವ ತೀರ್ಪಿನ ಪ್ರಕಾರ ಬೀದಿ ನಾಯಿಗಳನ್ನು ಶಾಶ್ವತವಾಗಿ ಆಶ್ರಯ ತಾಣಗಳಲ್ಲಿ ಇಡುವಂತಿಲ್ಲ. ಅದರ ಬದಲಾಗಿ, ಬೀದಿ ನಾಯಿಗಳನ್ನು ಸೆರೆಹಿಡಿದು ಸಂತಾನ ಶಕ್ತಿಹರಣ ಚಿಕಿತ್ಸೆ ಮತ್ತು ರೇಬೀಸ್ ಲಸಿಕೆ ಹಾಕಬೇಕು. ಬಳಿಕ ಆ ನಾಯಿಗಳನ್ನು ಎಲ್ಲಿ ಹಿಡಿಯಲಾಗಿತ್ತೋ ಅದೇ ಸ್ಥಳಕ್ಕೆ ಮತ್ತೆ ತೆಗೆದುಕೊಂಡು ಹೋಗಿ ಬಿಡಬೇಕು. ಆದರೆ, ರೇಬೀಸ್ ಸೋಂಕಿತ, ಹುಚ್ಚು ಅಥವಾ ಆಕ್ರಮಣಕಾರಿ ವರ್ತನೆ ತೋರುವ ನಾಯಿಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ. ಅವುಗಳನ್ನು ಬಂಧನದಲ್ಲಿ ಇಡಬಹುದು ಎಂದು ಉನ್ನತ ನ್ಯಾಯಾಲಯ ಹೇಳಿದೆ.

ಹಾಗೆಯೇ, ಯಾವುದೇ ಕಾರಣಕ್ಕೂ ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡುವುದನ್ನು ನಿಷೇಧಿಸಲಾಗಿದೆ. ಇದರ ಬದಲು ವಾರ್ಡ್​ಗಳಲ್ಲಿ ನಿರ್ದಿಷ್ಟ ಸ್ಥಳಗಳನ್ನು ನಿಗದಿ ಮಾಡಿ ಅಲ್ಲಿ ನಾಯಿಗಳಿಗೆ ಆಹಾರ ಮಾಡಬೇಕು. ಹೀಗಾಗಿ ಫೀಡಿಂಗ್​ ಸ್ಟೇಷನ್​ಗಳನ್ನು ರಚಿಸಿ ಎಂದು ಕೋರ್ಟ್​ ಹೇಳಿದ್ದು, ಎಲ್ಲ ರಾಜ್ಯಗಳಿಗೆ ಕೋರ್ಟ್​ ನೋಟಿಸ್​ ನೀಡಿದೆ.