ಸುದರ್ಶನ ನ್ಯೂಸ್ ವಾಹಿನಿಯ ‘ಬಿಂದಾಸ್ ಬೋಲ್’ ಕಾರ್ಯಕ್ರಮದ ಎರಡು ಎಪಿಸೋಡ್ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ: ಹಿಂದಿಯ ಸುದರ್ಶನ ನ್ಯೂಸ್ ವಾಹಿನಿಯ ವಿವಾದಿತ ‘ಬಿಂದಾಸ್ ಬೋಲ್’ ಕಾರ್ಯಕ್ರಮದ ಎರಡು ಎಪಿಸೋಡ್ ಪ್ರಸಾರಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ಮುಸ್ಲಿಂ ಸಮುದಾಯವನ್ನು ‘ಕೆಟ್ಟದಾಗಿ’ ಬಿಂಬಿಸಲಾಗುತ್ತಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಇಂದು ಮತ್ತು ನಾಳೆ ಪ್ರಸಾರವಾಗಬೇಕಿದ್ದ ಎಪಿಸೋಡ್ ಗಳಿಗೆ ನಿರ್ಬಂಧ ವಿಧಿಸಿದೆ.

ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ತ್ರಿ ಸದಸ್ಯ ಪೀಠವು ಈ ಕಾರ್ಯಕ್ರಮದ ಬಗ್ಗೆ  ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿತ್ತು. ಸದ್ಯ ಕಾರ್ಯಕ್ರಮಕ್ಕೆ ತಡೆ ನೀಡಿ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿದೆ.

ನ್ಯಾಯಮೂರ್ತಿಗಳಾದ ಇಂದೂ ಮಲ್ಹೋತ್ರಾ ಮತ್ತು ಕೆ ಎಂ ಜೋಸೆಫ್ ಅವರನ್ನೂ ಒಳಗೊಂಡ ನ್ಯಾಯಪೀಠ, ಎಲೆಕ್ಟ್ರಾನಿಕ್ ಮಾಧ್ಯಮವನ್ನು ಸ್ವಯಂ ನಿಯಂತ್ರಣಕ್ಕೆ ತರುವ ಸಮಿತಿಯನ್ನು ನೇಮಿಸಬಹುದು ಎಂದು ಸೂಚಿಸಿದ್ದರು.

ನಾವು ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ ಕೆಲವು ಮಾನದಂಡಗಳನ್ನು ತರಬಲ್ಲ ಸಮಿತಿಯನ್ನು ನೇಮಿಸಬಹುದು ಎಂಬ ಅಭಿಪ್ರಾಯ ನಮ್ಮದು. ರಾಜಕೀಯವಾಗಿ ವಿಭಜಿಸುವ ಯಾವುದೇ ಸ್ವಭಾವವನ್ನು ನಾವು ಬಯಸುವುದಿಲ್ಲ. ಶ್ಲಾಘನೀಯ ಸ್ಥಾನಮಾನದ ಸದಸ್ಯರು ನಮಗೆ ಬೇಕು ಎಂದು ನ್ಯಾಯಪೀಠ ತಿಳಿಸಿದೆ.