ನವದೆಹಲಿ: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸಲು ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದರಿಂದ ಓಲಾ, ಉಬರ್, ರ್ಯಾಪಿಡೊ ಸೇರಿದಂತೆ ಬೈಕ್ ಟ್ಯಾಕ್ಸಿ ಅಗ್ರಿಗೇಟರ್ಗಳು ಹಾಗೂ ಲಕ್ಷಾಂತರ ಪ್ರಯಾಣಿಕರಿಗೆ ನಿರಾಳತೆ ಸಿಕ್ಕಿದೆ.
ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ. ಇದೇ ವೇಳೆ ರಾಜ್ಯ ಸರ್ಕಾರ ಮತ್ತು ಆಟೋ-ಟ್ಯಾಕ್ಸಿ ಚಾಲಕರ ಸಂಘಟನೆಗಳಿಗೆ ಹಿನ್ನಡೆಯಾಗಿದೆ.
ವಿಚಾರಣೆ ವೇಳೆ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರು ಬೈಕ್ ಟ್ಯಾಕ್ಸಿಗಳ ಕೈಗೆಟುಕುವ ದರದ ಮಹತ್ವವನ್ನು ಪ್ರಸ್ತಾಪಿಸಿದರು. ತಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಬೈಕ್ ಟ್ಯಾಕ್ಸಿ ಬಳಸುವ ಯುವತಿಯರೊಂದಿಗೆ ನಡೆಸಿದ ಸಂಭಾಷಣೆಯನ್ನು ಉಲ್ಲೇಖಿಸಿದ ಅವರು, ಕಚೇರಿಗೆ ಹೇಗೆ ಬರುತ್ತೀರಿ ಎಂದು ಕೇಳಿದಾಗ, ಕ್ಯಾಬ್ ಬಾಡಿಗೆಗೆ ಪಡೆಯಲು ಹೆಚ್ಚು ಹಣ ಬೇಕಾಗುವುದರಿಂದ ಬೈಕ್ ಟ್ಯಾಕ್ಸಿಯಲ್ಲಿ ಬರುವುದಾಗಿ ಯುವತಿಯರು ತಿಳಿಸಿದ್ದರು ಎಂದರು.
ಆಟೋದಲ್ಲಿ ಏಕೆ ಬರುವುದಿಲ್ಲ ಎಂದು ಪ್ರಶ್ನಿಸಿದಾಗ, ಆಟೋ ದರ ಬೈಕ್ ಟ್ಯಾಕ್ಸಿಗಿಂತ ಐದು ಪಟ್ಟು ಹೆಚ್ಚಿರುತ್ತದೆ ಎಂದು ಅವರು ಉತ್ತರಿಸಿದ್ದರು. ಈ ಮೂಲಕ ಸಾಮಾನ್ಯ ಜನರಿಗೆ ಬೈಕ್ ಟ್ಯಾಕ್ಸಿಗಳು ಎಷ್ಟು ಕೈಗೆಟುಕುವ ಸಾರಿಗೆ ವ್ಯವಸ್ಥೆಯಾಗಿವೆ ಎಂಬುದನ್ನು ನ್ಯಾಯಮೂರ್ತಿ ಉಲ್ಲೇಖಿಸಿದರು.
ಏನಿದು ಪ್ರಕರಣ?
ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿಗಳಿಗೆ ಸೂಕ್ತ ನಿಯಮಾವಳಿ ರೂಪಿಸುವವರೆಗೆ ಅವುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಈ ಹಿಂದೆ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಓಲಾ, ಉಬರ್, ರ್ಯಾಪಿಡೋ, ಬೈಕ್ ಮಾಲೀಕರು ಹಾಗೂ ಬೈಕ್ ಟ್ಯಾಕ್ಸಿ ಕಲ್ಯಾಣ ಸಂಘ ಮೇಲ್ಮನವಿ ಸಲ್ಲಿಸಿದ್ದವು.
2026ರ ಜನವರಿ 23ರಂದು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು ಬೈಕ್ ಟ್ಯಾಕ್ಸಿಗಳ ಮೇಲಿನ ನಿಷೇಧ ತೆರವುಗೊಳಿಸಿತ್ತು. ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಿ, ಕಾಂಟ್ರಾಕ್ಟ್ ಕ್ಯಾರೇಜ್ಗಳಾಗಿ ಬಳಸಬಹುದು. ಸರ್ಕಾರ ನಿಯಂತ್ರಣಾ ಷರತ್ತುಗಳನ್ನು ವಿಧಿಸಬಹುದೇ ಹೊರತು, ಕೇವಲ ದ್ವಿಚಕ್ರ ವಾಹನ ಎಂಬ ಕಾರಣಕ್ಕೆ ಪರವಾನಗಿ ನಿರಾಕರಿಸುವಂತಿಲ್ಲ ಎಂದು ಆದೇಶಿಸಿತ್ತು.
ಸರ್ಕಾರದ ವಾದವೇನಿತ್ತು?
ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕರ್ನಾಟಕ ಸರ್ಕಾರ, ಪ್ರಯಾಣಿಕರ ಸುರಕ್ಷತೆ, ವಿಮಾ ಸೌಲಭ್ಯದ ಕೊರತೆ ಹಾಗೂ 2019ರ ತಜ್ಞರ ಸಮಿತಿಯ ವರದಿಯನ್ನು ಮುಂದಿಟ್ಟಿತ್ತು. ರಾಜ್ಯದ ಇತರ ಭಾಗಗಳಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವ ಬಗ್ಗೆ ಪರಿಶೀಲಿಸಬಹುದಾದರೂ, ಬೆಂಗಳೂರಿನ ಸಂಚಾರ ದಟ್ಟಣೆಯ ಹಿನ್ನೆಲೆಯಲ್ಲಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ವಾದಿಸಿತ್ತು. ಐದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳೂ ಸರ್ಕಾರದ ಪರವಾಗಿ ಮೇಲ್ಮನವಿ ಸಲ್ಲಿಸಿದ್ದವು.
ವಿಚಾರಣೆ ವೇಳೆ ಕಾರುಗಳಿಗೆ ಹೋಲಿಸಿದರೆ ಬೈಕ್ಗಳು ರಸ್ತೆಯಲ್ಲಿ ಕಡಿಮೆ ಜಾಗ ಆಕ್ರಮಿಸುತ್ತವೆ ಎಂಬ ಅಂಶವನ್ನೂ ಸುಪ್ರೀಂ ಕೋರ್ಟ್ ಗಮನಿಸಿತ್ತು. ರಾಜ್ಯದಲ್ಲಿ ಸುಮಾರು 4.5 ಲಕ್ಷ ಪ್ರಯಾಣಿಕರು ಬೈಕ್ ಟ್ಯಾಕ್ಸಿ ಸೇವೆ ಬಳಸುತ್ತಿದ್ದಾರೆ ಎಂದು ಅಗ್ರಿಗೇಟರ್ಗಳ ಪರ ವಕೀಲರು ವಾದಿಸಿದ್ದರು. 2004 ಮತ್ತು 2024ರ ಕೇಂದ್ರ ಸರ್ಕಾರದ ಅಧಿಸೂಚನೆಗಳ ಪ್ರಕಾರ ದ್ವಿಚಕ್ರ ವಾಹನಗಳನ್ನು ಟ್ಯಾಕ್ಸಿಗಳಾಗಿ ಬಳಸಲು ಅವಕಾಶವಿದೆ ಎಂದು ಕೇಂದ್ರ ಸರ್ಕಾರವೂ ನ್ಯಾಯಪೀಠಕ್ಕೆ ತಿಳಿಸಿತ್ತು.
ಎಲ್ಲ ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಇದೀಗ ರಾಜ್ಯ ಸರ್ಕಾರ ಮತ್ತು ಆಟೋ ಸಂಘಟನೆಗಳ ಮೇಲ್ಮನವಿಗಳನ್ನು ವಜಾಗೊಳಿಸಿದೆ. ಇದರಿಂದ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಯಲು ಕಾನೂನುಬದ್ಧ ಹಾದಿ ಸುಗಮವಾದಂತಾಗಿದೆ.















