ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಹೋರಾಟಕ್ಕೆ ಸಂಪೂರ್ಣ ತೆರೆ ಹಾಕುವ ಹಿನ್ನೆಲೆಯಲ್ಲಿ ಉಮಾಭಾರತಿ, ಮುರಳಿ ಮನೋಹರ್ ಜೋಶಿ, ಸಾಧ್ವಿ ರಿತಂಬರ, ವಿನಯ್ ಕಟಿಯಾರ್ ಹಾಗೂ ಇತರರ ವಿರುದ್ಧದ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕೈಬಿಟ್ಟಿದೆ ಮತ್ತು 1992 ರಲ್ಲಿ ಬಾಬರಿ ಮಸೀದಿ ಧ್ವಂಸದಿಂದ ಉದ್ಭವಿಸಿದ ಪ್ರಕ್ರಿಯೆಗಳನ್ನು ಮುಚ್ಚುವಂತೆ ಆದೇಶಿಸಿದೆ.
“ವಿಸ್ತೃತ ಪೀಠದಿಂದ ತೀರ್ಪು ಬಂದಿದೆ. ಈ ವಿಷಯದಲ್ಲಿ ಈಗ ಏನೂ ಉಳಿದಿಲ್ಲ. ನೀವು ಸತ್ತ ಕುದುರೆ ಹೊಡೆಯುವುದನ್ನು ಮುಂದುವರಿಸಲು ಸಾಧ್ಯವಿಲ್ಲ. ನಾವು ಹಳೆಯ ವಿಷಯಗಳನ್ನು ಕೈಗೆತ್ತಿಕೊಳ್ಳುವ ಪ್ರಯತ್ನವನ್ನು ಮಾತ್ರ ಮಾಡುತ್ತಿದ್ದೇವೆ. ಕೆಲವು ಉಳಿಯಬಹುದು ಕೆಲವು ಹೋಗಬಹುದು. ಐವರು ನ್ಯಾಯಾಧೀಶರ ಪೀಠವು ಈಗಾಗಲೇ ದೊಡ್ಡ ಸಮಸ್ಯೆಯನ್ನು ನಿರ್ಧರಿಸಿದೆ. ಅರ್ಜಿದಾರರು ಸಾವನ್ನಪ್ಪಿದ್ದಾರೆ, ಪ್ರತಿವಾದಿಗಳ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಎಸ್‌ಕೆ ಕೌಲ್ ಹೇಳಿದರು.
ಇದರ ಜೊತೆ 2002 ರ ಗುಜರಾತ್ ಗಲಭೆಗಳಿಂದ ಉಂಟಾದ ಎಲ್ಲಾ ಪ್ರಕ್ರಿಯೆಗಳನ್ನು ಸಹ ಸುಪ್ರೀಂ ಕೋರ್ಟ್ ಮುಚ್ಚಿದೆ. ಬಾಕಿ ಉಳಿದಿರುವ ಒಂದು ಬ್ಯಾಚ್ ಅರ್ಜಿ ಬಗ್ಗೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ಸಮಯ ಕಳೆದಂತೆ ಪ್ರಕರಣಗಳು ಈಗ ನಿರುಪಯುಕ್ತವಾಗಿವೆ. ಒಂಬತ್ತು ಪ್ರಕರಣಗಳಲ್ಲಿ ಎಂಟು ಪ್ರಕರಣಗಳ ವಿಚಾರಣೆ ಮುಗಿದಿದೆ ಮತ್ತು ಗುಜರಾತ್‌ನ ನರೋಡಾ ಗಾಂವ್‌ನ ಒಂದು ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಅಂತಿಮ ವಾದಗಳು ನಡೆಯುತ್ತಿವೆ” ಎಂದು ಪೀಠ ಹೇಳಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಉಲ್ಲೇಖಿಸಿದೆ.
ಹಿಂದಿನ ಸಿಜೆಐಗಳ ವಿರುದ್ಧದ ಹೇಳಿಕೆಗಾಗಿ ಪ್ರಶಾಂತ್ ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೂಡಾ ನ್ಯಾಯಾಲಯ ಮುಕ್ತಾಯಗೊಳಿಸಿದೆ.