ಕಾರ್ಕಳ : ಕಟ್ಟಡ ಕಾರ್ಮಿಕರ ಕಾರ್ಡ್ ನವೀಕರಣಕ್ಕೆ ಹಲವಾರು ಎಡರು ತೊಡರುಗಳಿರುವ ಕಾರಣ ಸರಕಾರದಿಂದ ದೊರೆಯುವ ಸೌಲಭ್ಯ ಪಡೆಯುವಲ್ಲಿ ಕಟ್ಟಡ ಕಾರ್ಮಿಕರು ಪರದಾಡುವಂತಾಗಿದೆ. ಸರಕಾರದ ನೂತನ ನಿಯಮದಿಂದಾಗಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಇಲಾಖೆಯಿಂದ ಜಾರಿಗೆ ತರಲಾಗುವ ಕಾರ್ಡ್ ರಿನಿವಲ್ಗೆ ಸಮಸ್ಯೆಯಾಗಿದೆ. ನೂತನ ಕಾರ್ಡ್ ನಿರ್ಮಾಣವೂ ಸಾಧ್ಯವಾಗುತ್ತಿಲ್ಲ. ಕಟ್ಟಡ ನಿರ್ಮಾಣದಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಇತರ ನಿರ್ಮಾಣ ಹಂತದ ಕಾಮಗಾರಿ ಮಾಡುವ ಕೂಲಿ ಕಾರ್ಮಿಕರು, ಮರದ ಕೆಲಸದವರು, ಇಲೆಕ್ಟ್ರಿಶಿಯನ್, ಪ್ಲಂಬರ್, ರಸ್ತೆ ನಿರ್ಮಾಣ ಮಾಡುವ ಕಾರ್ಮಿಕರ ಕಾರ್ಡ್ ಇದೀಗ ನವೀಕರಣವಾಗುತ್ತಿಲ್ಲ.
ಈ ಬಗ್ಗೆ ಕಾರ್ಕಳ ಶಾಸಕ ಸದನದಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ. ರಾಜ್ಯ ಸರಕಾರ ರೂಪಿಸಿರುವ ಹೊಸ ನಿಯಮಾವಳಿಯಿಂದಾಗಿ ಕಟ್ಟಡ ಕಾರ್ಮಿಕರಿಗೆ ಸಮಸ್ಯೆಯಾಗಿದೆ. ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದಂತೆ ಇರುವ ಮಾರ್ಗಸೂಚಿ ಮಾರ್ಪಾಡು ಮಾಡುವಂತೆ ಆಗ್ರಹಿಸಿದ್ದಾರೆ.
ಕಾರ್ಡ್ ಹೊಂದಿದ ಕನಿಷ್ಟ 3 ವರ್ಷ ಕಟ್ಟಡ ಕಾರ್ಮಿಕರಾಗಿದ್ದವರಿಗೆ 60 ವರ್ಷದವರೆಗೆ 2 ಸಾವಿರ ರೂ. ಮಾಸಾಶನ ದೊರೆಯುವುದು. ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ಮದುವೆ ಸಂದರ್ಭ ಸಹಾಯ ಧನ ದೊರೆಯುವುದು. 50 ಸಾವಿರ ರೂ.ನಂತೆ ಇಬ್ಬರಿಗೆ ಈ ಸೌಲಭ್ಯ ಸಿಗುವುದು.
ಕಾರ್ಮಿಕರ ಮಕ್ಕಳಿಗೆ ಪ್ರತಿವರ್ಷ ವಿಧ್ಯಾಭ್ಯಾಸಕ್ಕೆ ಸಹಾಯಧನ ಸಿಗುತ್ತದೆ. ಈ ಸೌಲಭ್ಯಕ್ಕಾಗಿ ಸೇವಾ ಸಿಂಧು ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಕಾರ್ಡ್ ಹೊಂದಿದ ಕಾರ್ಮಿಕರಿಗೆ ಚಿಕಿತ್ಸೆ ಅಗತ್ಯವಿದ್ದಲ್ಲಿ, ಕಟ್ಟಡ ಕಾರ್ಮಿಕ ನೋಂದಾಯಿತ ಆಸ್ಪತ್ರೆಯಲ್ಲಿ ದಾಖಲಾದಲ್ಲಿ 2 ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚ ದೊರೆಯಲಿದೆ. ಇತರ ಸಾಮಾನ್ಯ ವೈದ್ಯಕೀಯ ಚಿಕಿತ್ಸೆಗೆ ದಾಖಲಾದಲ್ಲಿ 10 ಸಾವಿರದ ತನಕ ಚಿಕಿತ್ಸಾ ವೆಚ್ಚ ದೊರೆಯಲಿದೆ. ಕಾರ್ಮಿಕರ ಕುಟುಂಬದವರಿಗೂ ಸಹಾಯಧನ ದೊರೆಯುವುದು.
ಮಹಿಳಾ ಕಟ್ಟಡ ಕಾರ್ಮಿಕ ಮಹಿಳೆಯರಿಗೆ ಡೆಲಿವರಿಯ ಸಂದರ್ಭ 20,000 ದಿಂದ 30,000 ರೂ. ಮೊದಲ ಎರಡು ಮಕ್ಕಳಿಗೆ ಸಹಾಯಧನ ರೂಪದಲ್ಲಿ ದೊರೆಯಲಿದೆ. ವರ್ಷಕ್ಕೆ 6 ಸಾವಿರದಂತೆ ಮಗು ಹುಟ್ಟಿದ ಅನಂತರದ 3 ವರ್ಷ ಸಹಾಯಧನ ದೊರೆಯಲಿದೆ. ಅಪಘಾತದಿಂದಾಗಿ ಮರಣ ಹೊಂದಿದಲ್ಲಿ 5 ಲಕ್ಷ ರೂ. ವರೆಗೆ ಸಹಾಯಧನ ದೊರೆಯಲಿದೆ. ಕಟ್ಟಡ ಕೆಲಸ ಮಾಡುವ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿ ಅಂಗವೈಕಲ್ಯಕ್ಕೀಡಾದಲ್ಲಿ 2 ಲಕ್ಷದವರೆಗೆ ಸಹಾಯಧನ ಹಾಗೂ ಪ್ರತಿ ತಿಂಗಳು 2,000 ರೂ. ದೊರೆಯಲಿದೆ. ಕಾರ್ಮಿಕರಿಗೆ ತಮ್ಮ ಕೆಲಸಕ್ಕೆ ಅಗತ್ಯವಿರುವ ಕಿಟ್ಗಳನ್ನು ನೀಡಲಾಗುತ್ತದೆ. ಕಾರ್ಮಿಕರ ಕುಟುಂಬಕ್ಕೆ ಅನಿವಾರ್ಯ ಸಂದರ್ಭದಲ್ಲಿ ಸಹಾಯಧನ ದೊರೆಯುವುದು. ಕಾರ್ಮಿಕರಿಗೆ ಸಾಲ ಸೌಲಭ್ಯ, ಉಚಿತ ಬಸ್ ಸೌಲಭ್ಯವೂ ಇದೆ.
ಕಟ್ಟಡ ಕಾರ್ಮಿಕರ ಕಾರ್ಡ್ ಅವಧಿ 1, 3 ಮತ್ತು 5 ವರ್ಷದ್ದಾಗಿರುತ್ತದೆ. ಬಳಿಕ ಕಾರ್ಮಿಕರು ತಮ್ಮ ಕಾರ್ಡ್ನ್ನು ನವೀಕರಣ ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ, ಈಗ ಈ ಪ್ರಕಿಯೆಯಲ್ಲಿ ಸಮಸ್ಯೆ ಉಂಟಾಗುತ್ತಿದೆ. ಈ ಮೊದಲು ಕಾರ್ಮಿಕರು ತಮ್ಮ ನಿರ್ದಿಷ್ಟ ದಾಖಲೆಯೊಂದಿಗೆ ಗುತ್ತಿಗೆದಾರರ ಸಹಿಯ ಆಧಾರದ ಮೇಲೆ ಹೊಸ ಕಾರ್ಡ್ ಅಥವಾ ಕಾರ್ಡ್ ನವೀಕರಣ ಮಾಡಬಹುದಿತ್ತು. ಆದರೆ ಇದೀಗ ಈ ಪ್ರಕ್ರಿಯೆ ಜಟಿಲವಾಗಿದ್ದು, ಒಬ್ಬ ಕಟ್ಟಡ ಕಾರ್ಮಿಕ ಹೊಸ ಕಾರ್ಡ್ ಅಥವಾ ನವೀಕರಣ ಮಾಡಬೇಕಾದರೆ ಅವನು ಅದಕ್ಕೆ ನಿರ್ದಿಷ್ಟ ದಾಖಲೆಗಳೊಂದಿಗೆ 90 ದಿನಗಳ ಕೆಲಸದ ವಿವರ, ವೇತನ ದೃಢೀಕರಣ, ಕೆಲಸ ಮಾಡಿದ ನಾಲ್ಕು ಕಟ್ಟಡಗಳ ಲೈಸೆನ್ಸ್, ಕೆಲಸ ಮಾಡುವ ಲೈವ್ ರೆಕಾರ್ಡ್ ಮಾಡಬೇಕಾಗಿದೆ.
ಇದರಲ್ಲಿ ಓರ್ವ ಕಾರ್ಮಿಕ ಒಬ್ಬನೇ ಕಾಂಟ್ರಾಕ್ಟರ್ ಜೊತೆಗೆ ಕೆಲಸ ಮಾಡಿದ್ದಲ್ಲಿ ಇದು ಸುಲಭವಾಗಬಹುದು. ದಿನಕ್ಕೊಂದು ಮನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಇದ್ದಾರೆ. ಹೀಗಿರುವಾಗ ವೇತನ ದೃಢೀಕರಣ ಪಡೆಯುವುದು ಕಷ್ಟಕರ. ಇನ್ನು ನಾಲ್ಕು ಹೊಸ ಬಿಲ್ಡಿಂಗ್ನಲ್ಲಿ ಕೆಲಸ ಮಾಡಿದ ದಾಖಲೆ, ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಎಲ್ಲರೂ ಹೊಸ ಕಟ್ಟಡದಲ್ಲಿಯೇ ಕೆಲಸ ಮಾಡುತ್ತಾರೆ ಎನ್ನಲು ಸಾಧ್ಯವಿಲ್ಲ. ಆದ್ದರಿಂದ ಈ ನಿಯಮ ಸಮಂಜಸವಲ್ಲ. ಇನ್ನು ಇದೆಲ್ಲಾ ಇದೆ ಎಂದರೂ ಆನ್ಲೈನ್ ಅರ್ಜಿ ಸಲ್ಲಿಕೆಯ ಸಂದರ್ಭ ತಾಂತ್ರಿಕ ಅಡಚಣೆ ಮತ್ತೊಂದು ರೀತಿಯ ಸಮಸ್ಯೆಯಾಗಿದೆ. ಕಾರ್ಡ್ಗಾಗಿ ರಜೆ ಹಾಕಿ ಅಲೆದಾಡಿದ ಕಾರ್ಮಿಕನಿಗೆ ಸಂಬಳವೂ ಇಲ್ಲ, ಕಾರ್ಡ್ ಇಲ್ಲ ಎನ್ನುವಂತ ಪರಿಸ್ಥಿತಿ ಎದುರಾಗಿದೆ.
ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.