ಕಾರ್ಕಳ ಶಾಸಕ ಸುನಿಲ್ ಕುಮಾರ್ ಗೆ ಒಲಿದ ಸಚಿವ ಸ್ಥಾನ

ಉಡುಪಿ: ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರಿಗೆ ಕಡೆಗೂ ಸಚಿವನಾಗುವ ಭಾಗ್ಯ ಕೂಡಿ ಬಂದಿದ್ದು, ಬೊಮ್ಮಾಯಿ ಸಂಪುಟದಲ್ಲಿ ನೂತನ ಸಚಿವರಾಗಿ ನೇಮಕಗೊಂಡಿದ್ದಾರೆ.

ಕರಾವಳಿ ಭಾಗದ ಪ್ರಭಾವಿ ಮುಖಂಡನಾಗಿರುವ ಸುನಿಲ್ ಕುಮಾರ್, ಈ ಹಿಂದೆಯೇ ಸಚಿವರಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಚಿವ ಸ್ಥಾನ ಸಿಕ್ಕಿರಲಿಲ್ಲ. ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಒಂದೂವರೆ ವರ್ಷ ಬಾಕಿ ಇರುವುದರಿಂದ ಹಾಗೂ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಅವರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಅಸ್ತು ಎಂದಿದೆ ಎನ್ನಲಾಗಿದೆ.

ಆರ್ ಎಸ್ಎಸ್ ನಾಯಕರ ಬೆಂಬಲ ಜತೆಗೆ ಸಮುದಾಯದ ಬಲವೂ ಇರುವುದರಿಂದ ಕರಾವಳಿ ಭಾಗದಲ್ಲಿ ಪಕ್ಷ ಸಂಘಟನೆಗೆ ಸೂಕ್ತ ಆಯ್ಕೆ ಎಂಬ ಮಾತು ಕೇಳಿಬಂದಿದೆ. ಪ್ರಾದೇಶಿಕ ಸಮತೋಲನ ಹಾಗೂ ಜಾತಿ ಸಮೀಕರಣದ ನಿಟ್ಟಿನಿಂದಲೂ ಶಾಸಕ ಸುನಿಲ್ ಗೆ ಸಚಿವ ಸ್ಥಾನ ಒಲಿದು ಬಂದಿದೆ ಎಂದು ಹೇಳಲಾಗುತ್ತಿದೆ.