ಸುಳ್ಯ: ಸುಳ್ಯ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಕೆಳಭಾಗದಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಡೆಗೆ ಸಾಗುವ ರಸ್ತೆಯಲ್ಲಿ ವಿದ್ಯುತ್ ಕಂಬವನ್ನು ಸ್ಥಳಾಂತರಿಸದೆ ಅದರ ಸುತ್ತಲೇ ಕಾಂಕ್ರೀಟ್ ರಸ್ತೆ ನಿರ್ಮಿಸಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಈ ರಸ್ತೆಯ ಕೆಲಭಾಗದಲ್ಲಿ ಕಾಂಕ್ರೀಟ್ ಕಾಮಗಾರಿ ಕೈಗೊಳ್ಳಲಾಗಿದ್ದು, ರಸ್ತೆ ಮಧ್ಯದಲ್ಲಿದ್ದ ವಿದ್ಯುತ್ ಕಂಬವನ್ನು ತೆರವುಗೊಳಿಸದೆ ಅದನ್ನೇ ಒಳಗೊಂಡಂತೆ ರಸ್ತೆ ನಿರ್ಮಿಸಲಾಗಿದೆ. ಇದರಿಂದ ವಾಹನ ಸವಾರರಿಗೆ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿದ್ದು, ಅಪಘಾತ ಸಂಭವಿಸುವ ಭೀತಿ ವ್ಯಕ್ತವಾಗಿದೆ.
ವಿಷಯ ತಿಳಿದ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ಭಾಗೀರಥಿ ಮುರುಳ್ಯ ಕಾಮಗಾರಿಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ವಿದ್ಯುತ್ ಕಂಬವನ್ನು ಸ್ಥಳಾಂತರಿಸದೆ ರಸ್ತೆ ಕಾಂಕ್ರೀಟೀಕರಣ ಮಾಡಿರುವುದು ಅಪಾಯಕಾರಿಯಾಗಿದ್ದು, ಕೂಡಲೇ ಕಂಬಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿ, ಸುಳ್ಯ ನಗರದಲ್ಲಿ ರಸ್ತೆ ಮಧ್ಯೆ ವಿದ್ಯುತ್ ಕಂಬ ಉಳಿಸಿಕೊಂಡೇ ರಸ್ತೆ ನಿರ್ಮಿಸಿರುವ ಕುರಿತು ಸಮಗ್ರ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಪಂಚಾಯಿತಿ ಇಒ ರಾಜಣ್ಣ ಅವರಿಗೆ ಈ ಬಗ್ಗೆ ತಕ್ಷಣ ಕ್ರಮ ಜರುಗಿಸುವಂತೆ ಸೂಚಿಸಿದರು.

















