ಕುಂದಾಪುರ : ಜಾಲಾಡಿ – ಸಂತೋಷನಗರ ಮಧ್ಯೆ ಕ್ರಾಸಿಂಗ್ ಹಾಗೂ ಮೂವತ್ತುಮುಡಿ-ಜಾಲಾಡಿ ತನಕ ಎರಡೂ ಕಡೆಗಳಲ್ಲಿ ಸರ್ವೀಸ್ ರಸ್ತೆ ನಿರ್ಮಾಣದ ಕುರಿತಂತೆ ಗ್ರಾಮಸ್ಥರ ಬೇಡಿಕೆಗಳಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಸುಕುಮಾರ ಶೆಟ್ಟಿ ಸ್ಪಂದಿಸಿದ್ದಾರೆ.
ಭಾನುವಾರ ಗ್ರಾಮಸ್ಥರೆಲ್ಲರೂ ಸೇರಿ ಸಮಾಲೋಚನೆ ಸಭೆ ನಡೆಸಿ ಹೋರಾಟ ಸಮಿತಿ ರಚಿಸಿದ ಬೆನ್ನಲ್ಲೇ ಶಾಸಕರು ಸಮಿತಿಯ ಪದಾಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ನಿವಾಸಕ್ಕೆ ಕರೆದು ಮಾತುಕತೆ ನಡೆಸಿದ್ದಾರೆ. ಸೋಮವಾರ ಬೆಳಗ್ಗೆ ನೆಂಪುವಿನಲ್ಲಿರುವ ಶಾಸಕರ ಮನೆಗೆ ತೆರಳಿದ ಸಮಿತಿಯ ಪದಾಧಿಕಾರಿಗಳು ಹೆದ್ದಾರಿ ಅವೈಜ್ಙಾನಿಕ ಕಾಮಗಾರಿಗಳ ವಿರುದ್ದ ತಾವು ಅನುಭವಿಸುತ್ತಿರುವ ಸಮಸ್ಯೆಗಳು ಮತ್ತು ತಮ್ಮ ಬೇಡಿಕೆಗಳನ್ನು ಶಾಸಕರ ಮುಂದಿಟ್ಟರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಈ ಎಲ್ಲಾ ಸಮಸ್ಯೆಗಳ ಬಗ್ಗೆ ಜ.೧೭ ರಂದು ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಎಲ್ಲೆಲ್ಲ ಸರ್ವೀಸ್ ರಸ್ತೆ, ಜಂಕ್ಷನ್ ಬೇಕು, ಡಿವೈಡರ್ ಕ್ರಾಸಿಂಗ್ ಬೇಕು ಎನ್ನುವುದರ ಪಟ್ಟಿ ಕೊಡಿ. ಜ.೧೭ ರಂದು ಬೆಂಗಳೂರಿನಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದ್ದು, ಅಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು ಎಂದವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ರಾಘವೇಂದ್ರ ಕುಲಾಲ್, ಸುಧಾಕರ ದೇವಾಡಿಗ, ಉದಯ ದೇವಾಡಿಗ, ವೀಣಾ ಕನ್ನಡಕುದ್ರು, ಮತ್ತಿತರರಿದ್ದರು.