ನವದೆಹಲಿ: ಬಹುಕೋಟಿ ವಂಚನೆ ಪ್ರಕರಣದ ಆರೋಪದಲ್ಲಿ ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್ ಶುಕ್ರವಾರ ದೆಹಲಿಯ ಲೆಫ್ಟಿನೆಂಟ್ ಗವರ್ನರ್ (ಎಲ್-ಜಿ) ವಿಕೆ ಸಕ್ಸೇನಾ ಅವರಿಗೆ ಬರೆದಿರುವ ಹೊಸ ಪತ್ರದಲ್ಲಿ, ತಮ್ಮ ಭ್ರಷ್ಟಾಚಾರದ ಆರೋಪಗಳನ್ನು ದೃಢೀಕರಿಸಲು ಪಾಲಿಗ್ರಾಫ್ ಪರೀಕ್ಷೆಗೆ ಒಪ್ಪಿಗೆ ನೀಡಿದ್ದಾರೆ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಜೈಲಿನಲ್ಲಿರುವ ಆಪ್ ನಾಯಕ ಸತ್ಯೇಂದ್ರ ಜೈನ್ ಕೂಡಾ ತನ್ನ ಜೊತೆ ಪರೀಕ್ಷೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
“ಕೇಜ್ರಿವಾಲ್ ಜಿ, ಸುಳ್ಳು ಎಂದು ಅಳುವ ಬದಲು, ಪಾಲಿಗ್ರಾಫ್ ಪರೀಕ್ಷೆಗೆ ಒಪ್ಪಿಕೊಳ್ಳಲು ಎದೆಗಾರಿಕೆ ಮತ್ತು ಧೈರ್ಯವನ್ನು ಹೊಂದಿರಿ, ”ಎಂದು ಸುಕೇಶ್ ತಮ್ಮ ವಕೀಲರ ಮೂಲಕ ಬಿಡುಗಡೆ ಮಾಡಿರುವ ಪತ್ರದಲ್ಲಿ ಬರೆದಿದ್ದಾರೆ.
ಕೇಜ್ರಿವಾಲ್, ಜೈನ್ ಮತ್ತು ತನ್ನ ಪಾಲಿಗ್ರಾಫ್ ಪರೀಕ್ಷೆಗಳನ್ನು ಮುಖಾಮುಖಿಯಾಗಿ ನಡೆಸಬೇಕು ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ನೇರ ಪ್ರಸಾರ ಮಾಡಬೇಕು ಎಂದು ಸುಕೇಶ್ ಸಲಹೆ ನೀಡಿದ್ದಾರೆ. ಇದರಿಂದ ಇಡೀ ದೇಶವೆ ಕೇಜ್ರಿವಾಲ್ ಮತ್ತು ಜೈನ್ ಅವರ ನಿಜರೂಪವನ್ನು ವೀಕ್ಷಿಸಬಹುದು ಎಂದು ಅವರು ಹೇಳಿದ್ದಾರೆ.
“ಈ ಸಮಸ್ಯೆಯನ್ನು ಬೇರೆಡೆಗೆ ತಿರುಗಿಸಬೇಡಿ, ನೀವು ಮತ್ತು . ಜೈನ್ ನನಗೆ ಹೇಗೆ ಹೇಳಿ ನಗುತ್ತಿದ್ದಿರಿ, ದಾಳಿಯೇ ಅತ್ಯುತ್ತಮ ರಕ್ಷಣಾ ವಿಧಾನ ಎಂದು … ಜನರು ಇನ್ನು ಮುಂದೆ ನಿಮ್ಮ ನಾಟಕವನ್ನು ನಂಬುವ ಮೂರ್ಖರಲ್ಲ,” ಎಂದು ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಮನಿ ಲಾಂಡರಿಂಗ್ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದೆಹಲಿಯ ತಿಹಾರ್ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್ ಪತ್ರದಲ್ಲಿ ಬರೆದಿದ್ದಾರೆ ಎಂದು ವರದಿಯಾಗಿದೆ.
ತನ್ನ ವಿರುದ್ಧದ ವಂಚನೆ ಪ್ರಕರಣಗಳಲ್ಲಿ ತಾನು ಇನ್ನೂ ಶಿಕ್ಷೆಗೊಳಗಾಗಿಲ್ಲ ಎನ್ನುವುದನ್ನುಉಲ್ಲೇಖಿಸಿ, ತನ್ನನ್ನು “ವಂಚಕ” ಎಂದು ಕರೆಯುವುದನ್ನು ತಡೆಯುವಂತೆ ಸುಕೇಶ್ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
ಆಪ್ ಪಕ್ಷದ ಸತ್ಯೇಂದ್ರ ಜೈನ್ ತನ್ನಿಂದ 10 ಕೋಟಿ ರೂ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಸುಕೇಶ್ ಹಲವಾರು ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಕೇಜ್ರಿವಾಲ್ ಅವರು “ರಾಜ್ಯಸಭೆಗೆ ನಾಮನಿರ್ದೇಶನಕ್ಕಾಗಿ 50 ಕೋಟಿ ರೂ ಕೇಳಿದ್ದಾರೆ” ಎಂದೂ ಸುಕೇಶ್ ಆರೋಪಿಸಿದ್ದಾರೆ. ಮಾಜಿ ಡಿಜಿ ಸಂದೀಪ್ ಗೋಯೆಲ್ ಮತ್ತು ಜೈಲು ಆಡಳಿತ ಕೂಡ ಇದರಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿದರು.
ಗುರುವಾರ, ಸುಕೇಶ್ ದೆಹಲಿ ಎಲ್ ಜಿ ಸಕ್ಸೇನಾ ಅವರಿಗೆ ಪತ್ರ ಬರೆದು ಆಪ್ ನಾಯಕರ ವಿರುದ್ಧದ ದೂರನ್ನು ಹಿಂಪಡೆಯುವಂತೆ ತನಗೆ ಬೆದರಿಕೆಗಳು ಬರುತ್ತಿವೆ ಎಂದು ಪುನರುಚ್ಚರಿಸಿದ್ದಾರೆ. ಅಲ್ಲದೆ ತನ್ನನ್ನು ನಗರದ ಹೊರಗಿರುವ ಜೈಲಿಗೆ ವರ್ಗಾಯಿಸುವಂತೆ ಕೋರಿದ್ದಾರೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ಮಾಡಿದೆ.