ಹೂಳೆತ್ತಲು ಬಾವಿಗಿಳಿದ ಇಬ್ಬರು ಕಾರ್ಮಿಕರ ಜೀವ ಉಳಿಸಿದ ಹಿಂ.ಜಾ.ವೇ ಕಾರ್ಯಕರ್ತ ಸುಜಿತ್ ನಾಯಕ್

ಕಾರ್ಕಳ: ಇಲ್ಲಿನ ಬೈಲೂರು ಎಂಬಲ್ಲಿ ಬಾವಿಯ ಹೂಳು ತೆಗೆಯಲು ಹೋಗಿ ಉಸಿರುಗಟ್ಟಿ ಬಾವಿಯೊಳಗೆ ಅಸ್ವಸ್ಥಗೊಂಡಿದ್ದ ಮೂವರು ಕೂಲಿ ಕಾರ್ಮಿಕರನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಸುಜಿತ್ ನಾಯಕ್ ನೀರೆ ಅವರು ಮೇಲೆತ್ತುವ ಮೂಲಕ ಇಬ್ಬರ ಜೀವ ಉಳಿಸಿ ಸಾಹಸ ಮೆರೆದಿದ್ದಾರೆ.

ದುರಾದೃಷ್ಟವಶಾತ್ ಓರ್ವ ಕೂಲಿಕಾರ್ಮಿಕನ ಪ್ರಾಣಪಕ್ಷಿ ಅಷ್ಟೊತ್ತಿಗೆ ಹಾರಿಹೋಗಿತ್ತು. ಮೂಡುಬಿದಿರೆ ಕೋಟೆಬಾಗಿಲು ನಿವಾಸಿ ಮಣಿ (24) ಎಂಬವರು ಅದಾಗಲೇ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಅಸ್ವಸ್ಥಗೊಂಡ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಜೀವ ರಕ್ಷಕನಾಗಿ ಬಂದ ಸುಜಿತ್:
ಸ್ನೇಹಿತರ ಮೂಲಕ ಘಟನೆಯ ಬಗ್ಗೆ ಮಾಹಿತಿ ತಿಳಿದ ಸುಜಿತ್ ನಾಯಕ್, ಉಟ್ಟ  ಬಟ್ಟೆಯಲ್ಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ್ದರು. ಕೂಡಲೇ ಕಾರ್ಮಿಕರನ್ನು ಮೇಲೆತ್ತಲು ಬೇಕಾದ ಹಗ್ಗಗಳನ್ನು ರೆಡಿಮಾಡಿಕೊಂಡು ಸುಜಿತ್ ಬಾವಿಯೊಳಗೆ ಇಳಿದರು. ಬಾವಿಯೊಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಕೂಲಿ ಕಾರ್ಮಿಕರನ್ನು ಒಬ್ಬೊಬ್ಬರನ್ನಾಗಿ ಮೇಲಿದ್ದ ಜನರ ಸಹಕಾರದೊಂದಿಗೆ ಮೇಲಕ್ಕೆ ಎತ್ತಿದರು.

ಅಗ್ನಿ ಶಾಮಕಕ್ಕೆ ಕಾಯುತ್ತಿದ್ದರೆ ಬದುಕುತ್ತಿರಲಿಲ್ಲ:
ಬಾವಿಯ ಬಳಿ ತುಂಬಾ ಜನ ಸೇರಿದ್ದರು. ಆದರೆ ಯಾರು ಬಾವಿಯೊಳಗೆ ಇಳಿಯಲು ಧೈರ್ಯ ಮಾಡಲಿಲ್ಲ. ಅಗ್ನಿ ಶಾಮಕದವರು ಬರಲಿಯೆಂದು ಕಾಯುತ್ತಿದ್ದರು. ಅಗ್ನಿ ಶಾಮಕ ಬರುವ ಮೊದಲೇ ನಾನು ಬಾವಿಯೊಳಗೆ ಇಳಿದು ಮೂವರನ್ನು ಮೇಲಕ್ಕೆತ್ತಿದ್ದೆ. ಅಗ್ನಿಶಾಮಕದವರಿಗೆ ಕಾಯುತ್ತಿದ್ದರೆ ಮೂವರು ಬದುಕುತ್ತಿರಲಿಲ್ಲ ಎನ್ನುತ್ತಾರೆ ಸುಜಿತ್ ನಾಯಕ್.

ಈ ಬಾವಿಯೊಳಗೆ ಉಸಿರಾಡಲು ಸಮಸ್ಯೆ ಇದೆ. ಈ ಸಮಸ್ಯೆ ಮೊದಲಿನಿಂದಲು ಇತ್ತು. ನಾನು ಕೂಡ ಮೊದಲು ಇಳಿದಾಗ ಉಸಿರಾಡಲು ಸಮಸ್ಯೆ ಆಯಿತು. ಹಾಗಾಗಿ ಮೇಲೆ ಬಂದು ಸುರಕ್ಷಿತ ಕ್ರಮಗಳನ್ನು ಕೈಕೊಂಡು ಬಾವಿಯೊಳಗೆ ಇಳಿದು, ಹಗ್ಗಗಳನ್ನು ಹಾಕಿ ಒಬ್ಬೊಬ್ಬರನ್ನೇ ಮೇಲಕ್ಕೆ ಎತ್ತಿದೆವು. ಬಾವಿ 35 ಫೀಟ್ (7 ಮುಂಡು) ಇರಬಹುದು ಎಂದು ಸುಜಿತ್ ನಾಯಕ್ ತಿಳಿಸಿದ್ದಾರೆ.