ಸುಧಾಮೂರ್ತಿಯವರ ‘ಗ್ರ್ಯಾಂಡ್ ಮಾ’ಸ್ ಬ್ಯಾಗ್ ಆಫ್ ಸ್ಟೋರೀಸ್’ ಪುಸ್ತಕಕ್ಕೆ ಬಾಲ ಸಾಹಿತ್ಯ ಪುರಸ್ಕಾರದ ಗರಿ

ನವದೆಹಲಿ: ಆಡು ಮುಟ್ಟದ ಸೊಪ್ಪಿಲ್ಲ, ಸುಧಾ ಮೂರ್ತಿಯವರು ಕೈಯಾಡಿಸದ ಕ್ಷೇತ್ರವಿಲ್ಲ. ಉದ್ಯೋಗ, ಉದ್ಯಮ, ಸಮಾಜ ಸೇವೆ, ಸಾಹಿತ್ಯ ಮುಂತಾದ ಹತ್ತು ಹಲವು ಆಯಾಮಗಳಲ್ಲಿ ತನ್ನದೇ ಛಾಪು ಮೂಡಿಸಿರುವ ಸುಧಾಮೂರ್ತಿ ಒಳ್ಳೆಯ ಬರಹಗಾರ್ತಿಯೂ ಹೌದು. ಇದೀಗ ಸುಧಾಮೂರ್ತಿಯವರರು ಬರೆದಿರುವ ಮಕ್ಕಳ ಪುಸ್ತಕಕ್ಕೆ ಪ್ರಶಸ್ತಿಯೊಂದು ಅರಸಿ ಬಂದಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ 2023ರ ಪ್ರಶಸ್ತಿಗೆ ಸುಧಾಮೂರ್ತಿಯವರನ್ನು ಆಯ್ಕೆ ಮಾಡಲಾಗಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ವರ್ಷದ ಬಾಲ ಸಾಹಿತ್ಯ ಪುರಸ್ಕಾರ ಹಾಗೂ ಯುವ ಪುರಸ್ಕಾರ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ. ಬಾಲ ಸಾಹಿತ್ಯ ಪುರಸ್ಕಾರಕ್ಕೆ ಕನ್ನಡದ ಪ್ರಸಿದ್ಧ ಲೇಖಕಿ ಸುಧಾ ಮೂರ್ತಿ, ವಿಜಯಶ್ರೀ ಹಾಲಾಡಿ ಸೇರಿ 22 ಜನರು ಹಾಗೂ ಯುವ ಪುರಸ್ಕಾರಕ್ಕೆ ಮಂಜುನಾಯಕ್ ಚಳ್ಳೂರು ಸೇರಿ 20 ಲೇಖಕರು ಆಯ್ಕೆಯಾಗಿದ್ದಾರೆ.

ಸುಧಾಮೂರ್ತಿಯವರ ‘ಗ್ರ್ಯಾಂಡ್ ಮಾ’ಸ್ ಬ್ಯಾಗ್ ಆಫ್ ಸ್ಟೋರೀಸ್’ ಎಂಬ ಇಂಗ್ಲಿಷ್ ಪುಸ್ತಕಕ್ಕೆ ಈ ಪ್ರಶಸ್ತಿ ಲಭಿಸಿದೆ. ಮಕ್ಕಳ ಸಾಹಿತ್ಯಕ್ಕಾಗಿ ಕೊಡುವ ಅತ್ಯುತೃಷ್ಟ ಪ್ರಶಸ್ತಿ ಇದಾಗಿದ್ದು, ಪ್ರಶಸ್ತಿಗಳ ವಿಜೇತರಿಗೆ ತಾಮ್ರದ ಫಲಕ ಮತ್ತು ತಲಾ 50,000 ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ.

ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮಾಧವ್ ಕೌಶಿಕ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.