2014ರ ಆಗಸ್ಟ್ ತಿಂಗಳಲ್ಲಿ ಕೇರಳದ ಕೆ.ಎಸ್. ಶೀಜ ಅವರ ಜೀವನದಲ್ಲಿ ಅನಿರೀಕ್ಷಿತ ಸಂಕಷ್ಟ ಎದುರಾಯಿತು. ಮೆಕಾನಿಕಲ್ ಇಂಜಿನಿಯರ್ ಆಗಿದ್ದ ಅವರ ಮಗ ಕೊಯಂಬತ್ತೂರಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕಾಲಿಗೆ ದೊಡ್ಡ ಹಾನಿಯಾಯಿತು. ಮಗನ ಚಿಕಿತ್ಸೆಗಾಗಿ ಶೀಜ ಮತ್ತು ಅವರ ಕುಟುಂಬ ತಮಿಳುನಾಡಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಂಡು, ಆಸ್ಪತ್ರೆಯ ಸಮೀಪದಲ್ಲಿರುವ ಮನೆವೊಂದರಲ್ಲಿ ಸುಮಾರು ಒಂದೂವರೆ ವರ್ಷ ವಾಸವಿದ್ದರು.
ಆ ಅವಧಿಯಲ್ಲಿ ಆಸ್ಪತ್ರೆ ಓಡಾಟ ಹಾಗೂ ನಿರಂತರ ಚಿಕಿತ್ಸೆಯಿಂದ ಶೀಜ ಮಾನಸಿಕವಾಗಿ ಬಹಳ ಒತ್ತಡ ಅನುಭವಿಸಿದರು. ಈ ಸಮಯದಲ್ಲಿ ಅವರಿಗೆ ನೆಮ್ಮದಿಯ ದಾರಿ ತೋರಿದದ್ದು ಕೃಷಿ. ಅವರು ವಾಸಿಸುತ್ತಿದ್ದ ಮನೆಯ ಸುತ್ತಮುತ್ತಲಿನ ಜಾಗದಲ್ಲಿ ತರಕಾರಿ ಸಸಿಗಳನ್ನು ನೆಡಲು ಪ್ರಾರಂಭಿಸಿದರು. ಬೀಜ ಬಿತ್ತುವುದು, ಸಸಿಗಳನ್ನು ಬೆಳೆಸುವುದು ಮತ್ತು ಅವುಗಳ ಬೆಳವಣಿಗೆಯನ್ನು ಗಮನಿಸುವುದು ಅವರಿಗೆ ಹೊಸ ಆಶೆಯನ್ನು ತುಂಬಿತು.
“ಬೀಜಗಳು ಮೊಳಕೆಯೊಡೆಯುವುದು, ಹೂಗಳು ಅರಳುವುದು ನೋಡುತ್ತಾ ಜೀವನದ ಮೇಲೆ ಮತ್ತೆ ಭರವಸೆ ಮೂಡಿತು,” ಎಂದು ಶೀಜ ಹೇಳುತ್ತಾರೆ.
53 ವರ್ಷದ ಶೀಜ ಅವರು ಪಿಯುಸಿ ವಿದ್ಯಾಭ್ಯಾಸ ಪಡೆದವರು. ಹಲವು ವರ್ಷಗಳ ಕಾಲ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದ ಅವರು, ಮಗನ ಚಿಕಿತ್ಸೆ ಬಳಿಕ ಕೇರಳಕ್ಕೆ ಮರಳಿದ ನಂತರ ಮಹತ್ವದ ನಿರ್ಧಾರ ಕೈಗೊಂಡರು. ತಮಿಳುನಾಡಿನಲ್ಲಿ ಆರಂಭಿಸಿದ್ದ ಕೃಷಿ ಚಟುವಟಿಕೆಯನ್ನು ಮುಂದುವರಿಸಿ, ಸಾವಯವ ಕೃಷಿಯ ಮೂಲಕ ಹಣ್ಣು ಮತ್ತು ತರಕಾರಿಗಳನ್ನು ಬೆಳೆಸಬೇಕೆಂದು ತೀರ್ಮಾನಿಸಿದರು. ಕುಟುಂಬದ ಬೆಂಬಲವೂ ಅವರಿಗೆ ದೊರಕಿತು. ನಂತರ ಸರ್ಕಾರಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದು ಸಾವಯವ ಕೃಷಿಯ ವಿಧಾನಗಳನ್ನು ತಿಳಿದುಕೊಂಡರು.

ತಮ್ಮ ಕುಟುಂಬದ 25 ಸೆಂಟ್ಸ್ ಜಾಗ ಮತ್ತು ಲೀಸಿಗೆ ಪಡೆದ ಒಂದು ಎಕರೆ ಜಮೀನಿನಲ್ಲಿ ಶೀಜ ಸಾವಯವ ಕೃಷಿ ಆರಂಭಿಸಿದರು. ಆರಂಭದಲ್ಲಿ ಟೊಮೆಟೊ, ಕ್ಯಾರೆಟ್ ಸೇರಿದಂತೆ ಕೆಲವು ತರಕಾರಿಗಳನ್ನು ಬೆಳೆಸಿದರು. ನಂತರ ಕೃಷಿಯನ್ನು ವಿಸ್ತರಿಸಿ ಇಂದು ಅವರ ಜಮೀನಿನಲ್ಲಿ ಸುಮಾರು 200 ಗಿಡಗಳಿಂದ ಸಮೃದ್ಧ ಫಸಲು ದೊರಕುತ್ತಿದೆ. ಸುಮಾರು 25 ವಿಧದ ತರಕಾರಿಗಳು ಹಾಗೂ ಕಲ್ಲಂಗಡಿ, ರಾಂಬುಟಾನ್, ಮ್ಯಾಂಗೋಸ್ಟಿನ್ ಸೇರಿದಂತೆ ಎಂಟು ವಿಧದ ಹಣ್ಣುಗಳನ್ನು ಅವರು ಬೆಳೆಸುತ್ತಿದ್ದಾರೆ.
ಸಾವಯವ ಕೃಷಿಯ ಜೊತೆಗೆ ಜೇನುನೊಣ ಸಾಕಣೆ, ಕೋಳಿ ಸಾಕಣೆ ಮತ್ತು ಅರಿಶಿನ ಸಂಸ್ಕರಣೆಯನ್ನೂ ಆರಂಭಿಸಿದ್ದಾರೆ. ಕೋಳಿ ಹಿಕ್ಕೆಯನ್ನು ಗೊಬ್ಬರವಾಗಿ ಬಳಸುವ ಸರಳ ವಿಧಾನವೊಂದನ್ನೂ ಅವರು ಅನುಸರಿಸುತ್ತಿದ್ದಾರೆ. 200 ಲೀಟರ್ ನೀರಿನ ಡ್ರಮ್ಮಿನಲ್ಲಿ ಕೋಳಿ ಹಿಕ್ಕೆ ತುಂಬಿದ ಚೀಲವನ್ನು ನೇತು ಹಾಕಿ, ಅದರ ಪೋಷಕಾಂಶಗಳು ನಿಧಾನವಾಗಿ ನೀರಿಗೆ ಬೆರೆಸುವಂತೆ ಮಾಡುತ್ತಾರೆ. ನಂತರ ಆ ದ್ರಾವಣವನ್ನು ನೀರಿನೊಂದಿಗೆ ಬೆರೆಸಿ ಗಿಡಗಳಿಗೆ ದ್ರವಗೊಬ್ಬರವಾಗಿ ಬಳಸುತ್ತಾರೆ.
ಶೀಜ ಅವರ ಸಾವಯವ ಹಣ್ಣು-ತರಕಾರಿಗಳ ತಾಜಾತನ ಮತ್ತು ರುಚಿ ಸ್ಥಳೀಯರಲ್ಲಿ ಹೆಚ್ಚಿನ ಬೇಡಿಕೆಯನ್ನು ಮೂಡಿಸಿದೆ. ವಾಟ್ಸಾಪ್ ಗುಂಪಿನ ಮೂಲಕ ಅವರು ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳನ್ನು ತಲುಪಿಸುತ್ತಿದ್ದಾರೆ. ಹಣ್ಣು-ತರಕಾರಿಗಳು, ಜೇನು, ಕೋಳಿಮೊಟ್ಟೆ ಮತ್ತು ಅರಿಶಿನ ಹುಡಿ ಮಾರಾಟದಿಂದ ವರ್ಷಕ್ಕೆ ಸುಮಾರು 50 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅದರಲ್ಲಿ ಜೇನು ಮಾರಾಟದಿಂದಲೇ ಸುಮಾರು 11 ಸಾವಿರ ರೂಪಾಯಿ ಲಭಿಸುತ್ತದೆ.
ಇದರ ಜೊತೆಗೆ “ಶೀ ಗಾರ್ಡನ್” ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಸಾವಯವ ಕೃಷಿ ಬಗ್ಗೆ ಮಾಹಿತಿ ಹಂಚಿಕೊಂಡು ಹಲವರಿಗೆ ಪ್ರೇರಣೆಯಾಗುತ್ತಿದ್ದಾರೆ. “ಈ ತೋಟ ಕೇವಲ ಕೃಷಿಯಲ್ಲ, ನನ್ನ ಜೀವನದ ಸಂಕಷ್ಟಗಳನ್ನು ಮರೆಸಿದ ಒಂದು ಆಶ್ರಯ. ಈಗ ಇದು ಅನೇಕ ಜನರಿಗೆ ಪ್ರೇರಣೆಯಾಗಿದೆ,” ಎಂದು ಶೀಜ ಸಂತೋಷದಿಂದ ಹೇಳುತ್ತಾರೆ.
-ಬರಹ:ಅಡ್ಡೂರು ಕೃಷ್ಣರಾವ್
















