50 ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ: ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆಗೆ ಮತ್ತೊಂದು ಗರಿ

ಉಡುಪಿ: ಕೋವಿಡ್ -19 ಸೋಂಕು ಕಾಣಿಸಿಕೊಂಡಿದ್ದ 50 ಗರ್ಭಿಣಿಯರಿಗೆ ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆ ಯಶಸ್ವಿ ಹೆರಿಗೆ ಮಾಡಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

2020ರ ಮೇ 27ರಿಂದ ಅಕ್ಟೋಬರ್ 3ರ ವರೆಗೆ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವು 50 ಹೆರಿಗೆಗಳನ್ನು ಯಶಸ್ವಿಯಾಗಿ ನಡೆಸಿದೆ. ನವಜಾತ ಶಿಶುಗಳಿಗೆ ಕೋವಿಡ್ -19 ಸೋಂಕು ತಗುಲುವ ಅಪಾಯ ಇದ್ದುದರಿಂದ ಶಿಶುವನ್ನು ಸೋಂಕಿನಿಂದ ಮುಕ್ತಗೊಳಿಸಲು ಆಸ್ಪತ್ರೆ ಕಠಿಣ ಕ್ರಮಗಳನ್ನು ಕೈಗೊಂಡಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಗ್ಗೆ ಮಾತನಾಡಿದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ ಪ್ರಾಧ್ಯಾಪಕಿ ಡಾ. ಶಶಿಕಲಾ ಕೆ ಭಟ್, ಎಲ್ಲಾ ಹೆರಿಗೆಗಳು ತ್ರಾಸದಾಯಕವಾಗಿರಲಿಲ್ಲ. ಹೊಸದಾಗಿ ಹುಟ್ಟಿದ ಶಿಶುಗಳನ್ನು ಮಕ್ಕಳ ವಿಭಾಗವು ಜಾಗರೂಕತೆಯಿಂದ ನೋಡಿಕೊಳ್ಳುತ್ತಿತ್ತು. ನವಜಾತ ಶಿಶುವಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಾಯಂದಿರು ಮತ್ತು ನವಜಾತ ಶಿಶುಗಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ವಿಶೇಷ ಕಾಳಜಿ ನೀಡಲಾಗುತ್ತಿತ್ತು. ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಯಾವುದೇ ಕೋವಿಡ್ -19 ತೊಡಕುಗಳನ್ನು ರೋಗಿಗಳು ಎದುರಿಸಲಿಲ್ಲ ಎಂದು ನಾವು ಖಚಿತಪಡಿಸಿದ್ದೆವು ಎಂದು ಹೇಳಿದ್ದಾರೆ.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ ಉಮಾಕಾಂತ್ ಮಾತನಾಡಿ, ತಾಯಿ ಮತ್ತು ಮಗು ಸುರಕ್ಷತೆಗೆ ಹೆಚ್ಚಿನ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿತ್ತು. ಕಟ್ಟುನಿಟ್ಟಾದ ಸೋಂಕು ನಿಯಂತ್ರಣ ಮುನ್ನೆಚ್ಚರಿಕೆಗಳು ಮತ್ತು ರೋಗಿಗಳ ಆರೈಕೆ ನಿಯಮಾವಳಿಗಳೊಂದಿಗೆ ವೈದ್ಯರು ಮತ್ತು ಸಿಬ್ಬಂದಿಗಳು ಎಲ್ಲಾ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ ಎಂದರು.