ಎಡಪಂಥೀಯ ಉಗ್ರವಾದದ ಪ್ರಮಾಣದಲ್ಲಿ ಗಣನೀಯ ಇಳಿಕೆ: ಉಗ್ರವಾದದ ವಿರುದ್ದ ಶೂನ್ಯ ನೀತಿಗೆ ದೊರೆತ ಫಲ

ನವದೆಹಲಿ: ಮೂರು ದಶಕಗಳಿಂದ ಮಾವೋವಾದಿಗಳ ಭದ್ರಕೋಟೆಯಾಗಿದ್ದ ಜಾರ್ಖಂಡ್‌ನ ಬುಧಾ ಪಹಾಡ್ ಅನ್ನು ಇದೀಗ ಯಶಸ್ವಿಯಾಗಿ ತೆರವುಗೊಳಿಸಲಾಗಿದೆ ಮತ್ತು ಭದ್ರತಾ ಪಡೆಗಳ ಶಾಶ್ವತ ನೆಲೆಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮಹಾನಿರ್ದೇಶಕ ಕುಲದೀಪ್ ಸಿಂಗ್ ಹೇಳಿದ್ದಾರೆ.

ಎಡಪಂಥೀಯ ಉಗ್ರವಾದದ ವಿರುದ್ಧ (ಎಲ್‌ಡಬ್ಲ್ಯುಇ) ಭದ್ರತಾ ಪಡೆಗಳು ಸಾಧಿಸಿದ ಯಶಸ್ಸಿನ ಕುರಿತು ನವದೆಹಲಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ಭದ್ರತಾ ಪಡೆಗಳ ಶಿಬಿರಗಳನ್ನು ಸ್ಥಾಪಿಸಲು ಮತ್ತು ಪ್ರದೇಶವನ್ನು ನಿಯಂತ್ರಣಕ್ಕೆ ತರಲು ಈ ವರ್ಷದ ಏಪ್ರಿಲ್‌ನಿಂದ ಬುಧಾ ಪಹಾಡ್‌ನಲ್ಲಿ ಆಪರೇಷನ್ ಆಕ್ಟೋಪಸ್, ಆಪರೇಷನ್ ಡಬಲ್ ಬುಲ್ ಮತ್ತು ಆಪರೇಷನ್ ಥಂಡರ್‌ಸ್ಟಾರ್ಮ್ ಎನ್ನುವ ಮೂರು ಕಾರ್ಯಾಚರಣೆಗಳನ್ನು ನಡೆಸಲಾಗಿದೆ. ದೇಶಾದ್ಯಂತ ಎಡಪಂಥೀಯ ಉಗ್ರವಾದದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಭದ್ರತಾ ಪಡೆಗಳು ನಿರ್ಣಾಯಕ ಜಯ ಸಾಧಿಸಿವೆ ಎಂದು ಅವರು ಹೇಳಿದರು.

ಎಡಪಂಥೀಯ ಉಗ್ರವಾದದ ಘಟನೆಗಳು 77 ಪ್ರತಿಶತದಷ್ಟು ಕಡಿಮೆಯಾಗಿದೆ, 2009 ರಲ್ಲಿ 2 ಸಾವಿರದ 258 ರ ಅತ್ಯುನ್ನತ ಮಟ್ಟದಲ್ಲಿದ್ದ ಘಟನೆಗಳು 2021 ರಲ್ಲಿ 509 ಕ್ಕೆ ಇಳಿದಿದೆ. ಜಿಲ್ಲೆಗಳಲ್ಲಿ ಮಾವೋವಾದಿಗಳ ಪ್ರಭಾವವು ಗಣನೀಯವಾಗಿ ಕಡಿಮೆಯಾಗಿದ್ದು, 2010 ರಲ್ಲಿ 96 ಜಿಲ್ಲೆಗಳಿಂದ 2022 ರಲ್ಲಿ ಕೇವಲ 39 ಜಿಲ್ಲೆಗಳಿಗೆ ಸೀಮಿತವಾಗಿದೆ. 2019 ರಿಂದ ಎಡಪಂಥೀಯ ಉಗ್ರವಾದದ ವಿರುದ್ಧ ವಿಶೇಷ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಸಿ.ಆರ್.ಪಿ.ಎಫ್ ಡಿಜಿ ಮಾಹಿತಿ ನೀಡಿದರು. ಕೇಂದ್ರ ಮತ್ತು ರಾಜ್ಯ ಭದ್ರತಾ ಪಡೆಗಳು ಮತ್ತು ಸಂಬಂಧಿತ ಏಜೆನ್ಸಿಗಳ ಸಂಘಟಿತ ಪ್ರಯತ್ನಗಳು ಮತ್ತು ಅಭಿಯಾನಗಳು ಎಲ್‌ಡಬ್ಲ್ಯುಇ ವಿರುದ್ಧದ ಹೋರಾಟದಲ್ಲಿ ಅಭೂತಪೂರ್ವ ಯಶಸ್ಸಿಗೆ ಕಾರಣವಾಗಿವೆ ಎಂದು ಅವರು ಹೇಳಿದರು.

ಈ ವರ್ಷ ವಿವಿಧ ಕಾರ್ಯಾಚರಣೆಗಳಿಂದ 14 ಮಾವೋವಾದಿಗಳನ್ನು ತಟಸ್ಥಗೊಳಿಸಲಾಗಿದೆ. ಇವರಲ್ಲಿ ಏಳು ಮಂದಿ ಛತ್ತೀಸ್‌ಗಢದಲ್ಲಿ, ನಾಲ್ಕು ಜಾರ್ಖಂಡ್‌ನಲ್ಲಿ ಮತ್ತು ಮೂವರು ಮಧ್ಯಪ್ರದೇಶದಲ್ಲಿದ್ದರು. ಬಿಹಾರದಲ್ಲಿ 36 ಮಾವೋವಾದಿಗಳನ್ನು ಬಂಧಿಸಲಾಗಿದೆ, ಛತ್ತೀಸ್‌ಗಢದಲ್ಲಿ 436 ಮತ್ತು ಜಾರ್ಖಂಡ್‌ನಲ್ಲಿ 120 ಬಂಧಿಸಲಾಗಿದೆ ಎಂದು ಸಿಂಗ್ ಮಾಧ್ಯಮಗಳಿಗೆ ತಿಳಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವಿಟರ್‌ನಲ್ಲಿ ಸಿಆರ್‌ಪಿಎಫ್ ಮತ್ತು ರಾಜ್ಯ ಭದ್ರತಾ ಪಡೆಗಳ ನಿರ್ಣಾಯಕ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾರೆ ಮತ್ತು ಎಡಪಂಥೀಯ ಉಗ್ರವಾದ ಮತ್ತು ಭಯೋತ್ಪಾದನೆ ವಿರುದ್ಧ ಸರ್ಕಾರ ಶೂನ್ಯ ಸಹಿಷ್ಣುತೆಯ ನೀತಿಯನ್ನು ಮುಂದುವರಿಸುತ್ತದೆ ಮತ್ತು ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದಿದ್ದಾರೆ.