ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಕುರಿ ಮೇಕೆ ಘಟಕ ಸ್ಥಾಪನೆಗೆ ಸಹಾಯಧನ ಸೌಲಭ್ಯ

ಉಡುಪಿ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ವಿಶೇಷ ಘಟಕ ಯೋಜನೆ/ ಗಿರಿಜನ ಉಪಯೋಜನೆಯಡಿ ಕುರಿ ಹಾಗೂ ಮೇಕೆ ಘಟಕಗಳನ್ನು ಅರಂಭಿಸಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಹ ಅಭ್ಯರ್ಥಿಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಲ್ಲಿ ನೊಂದಾಯಿತರಾದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 18 ರಿಂದ 60 ವರ್ಷ ವಯೋಮಿತಿಯ ಮಹಿಳಾ ಸದಸ್ಯರು ಅಥವಾ ಮಹಿಳಾ ಸದಸ್ಯರು ಲಭ್ಯವಿಲ್ಲದಿದ್ದಲ್ಲಿ ಪುರುಷ ಸದಸ್ಯರು ಹಾಗೂ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳು ಇಲ್ಲದೇ ಇರುವ ತಾಲೂಕುಗಳಲ್ಲಿಯೂ ಸಹ ಕುರಿ ಸಾಕಾಣಿಕೆದಾರರು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಆಗಸ್ಟ್ 20 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ, ಉಡುಪಿ ಅಥವಾ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.